
ಮಾರ್ಗದಲ್ಲಿ ಹಿಂಸಾಚಾರ ಸೃಷ್ಟಿಯಾಗುವ ಆತಂಕ: ರಾಹುಲ್ ಗಾಂಧಿ ಬೆಂಗಾವಲು ಪಡೆ ವಾಹನ ತಡೆದ ಮಣಿಪುರ ಪೊಲೀಸರು
ಇಂಫಾಲ: ಮಣಿಪುರ ಹಿಂಸಾಚಾರದಿಂದ ಹೆಚ್ಚು ತತ್ತರಿಸಿರುವ ಚುರಚಂದಪುರ ಜಿಲ್ಲೆಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆ ವಾಹನವನ್ನು ಪೊಲೀಸರು ತಡೆಹಿಡಿದಿದ್ದಾರೆ ಎಂದು ಗುರುವಾರ ತಿಳಿದುಬಂದಿದೆ.
ರಾಹುಲ್ ಗಾಂಧಿ ಇಂದು ಬೆಳಗ್ಗೆ ಇಂಫಾಲ್ ಗೆ ಬಂದಿಳಿದರು ಹಾಗೂ ಚುರಚಂದಪುರ ಜಿಲ್ಲೆಗೆ ತೆರಳುತ್ತಿದ್ದ ಮಾರ್ಗದಲ್ಲಿ ಅವರನ್ನು ತಡೆಯಲಾಗಿದೆ.
ಮಣಿಪುರಕ್ಕೆ ಇಂದು ಭೇಟಿ ನೀಡಿದ್ದ ರಾಹುಲ್ ಗಾಂಂಧಿಯವರು ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿ, ಸಂಕಷ್ಟಕ್ಕೊಳಗಾದ ಜನರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದರು. ಆದರೆ, ಇಂಫಾಲದಿಂದ 20 ಕಿಲೋಮೀಟರ್ ದೂರದಲ್ಲಿರುವ ಬಿಷ್ಣುಪುರದಲ್ಲಿ ಮಣಿಪುರ ಪೊಲೀಸರು ಅವರನ್ನು ತಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹಿಂಸಾಚಾರ ಭೀತಿಯಿಂದಾಗಿ ಬೆಂಗಾವಲು ಪಡೆಯನ್ನು ತಡೆಹಿಡಿಯಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.