ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ ನಿನ್ನೆ ಹಲವೆಡೆ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು ಇಂದು ಕೆಆರ್ ಪುರ ತಹಶೀಲ್ದಾರ್ ಅಜಿತ್ ರೈ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು ಸೇರಿ ಅಜಿತ್ಗೆ ಸೇರಿದ 12 ಕಡೆ ಲೋಕಾಯುಕ್ತ ಪೊಲೀಸರು ನಿನ್ನೆ ದಾಳಿ ನಡೆಸಿದ್ದರು. ಸತತ 30 ಗಂಟೆಗಳ ಶೋಧ ನಡೆಸಿ ಲಭ್ಯವಾದ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮಾಡಿರುವುದು ಕಂಡು ಬಂದ ಹಿನ್ನೆಲೆ ಅಜಿತ್ ರೈ ಅವರನ್ನು ಬಂಧಿಸಲಾಗಿದ್ದು, 24 ಗಂಟೆಗಳ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಅಜಿತ್ ರೈ ಅವರಿಗೆ ಸಂಬಂಧಿಸಿದ 10 ಸ್ಥಳಗಳಿಗೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳನ್ನು, ಐಷಾರಾಮಿ ಕಾರು ಮತ್ತು ಬೈಕ್ಗಳನ್ನು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿದ್ದು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೂಲಗಳ ಪ್ರಕಾರ ಹಾರ್ಸ್ ರೈಡಿಂಗ್ ಸ್ಕೂಲ್ ಮಾಡಲು ತಯಾರಿ ನಡೆಸುತ್ತಿದ್ದ ಅಜಿತ್ ರೈ ವರ್ಷಕ್ಕೆ ಒಂದು ಕೋಟಿಗೂ ಅಧಿಕ ಆದಾಯ ಹೊಂದಿದ್ದಾರೆ ಎನ್ನಲಾಗಿದೆ. ಆದರೂ ಆದಾಯವನ್ನು ದೊರೆತಿರುವ ಆಸ್ತಿಗಳು ಹಾಗೂ ಐಶಾರಾಮಿ ವಸ್ತುಗಳಿಗೆ ತಾಳೆ ಮಾಡಿದಾಗ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಬಹಳ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಇಂದು ಅಜಿತ್ ರೈ ಅವರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಪ್ರಮೋದ್ ನೇತೃತ್ವದಲ್ಲಿ ನಾಲ್ಕು ಕಾರುಗಳಲ್ಲಿ ಬೆಳ್ಳಂಬೆಳಗ್ಗೆ 4.30ರ ಸಮಯದಲ್ಲಿ ಅಜಿತ್ ರೈ ಮನೆ ಮೇಲೆ ದಾಳಿ ನಡೆದಿದೆ. ಸುಮಾರು 15 ಕ್ಕೂ ಹೆಚ್ಚು ಅಧಿಕಾರಿಗಳು ಅಜಿತ್ ರೈ ವಾಕಿಂಗ್ ಹೋಗುವ ಮುನ್ನ ದಾಳಿ ಮಾಡಿದ್ದು, ಅಜಿತ್ ರೈ ವಾಕಿಂಗ್ ಹೋಗಿದ್ರೆ, ತಪ್ಪಿಸಿಕೊಳ್ಳುವ ಸಾಧ್ಯತೆ ಇತ್ತು. ಅಜಿತ್ ಮನೆಯ ಪಾರ್ಕಿಂಗ್ ನಲ್ಲಿ ಬೈಕ್ ಹಾಗೂ ಕಾರ್ ಗಳ ತಪಾಸಣೆ ನಡೆದಿದೆ. ಐಶಾರಾಮಿ ಕಾರು, ಜೀಪ್ ಪತ್ತೆಯಾಗಿತ್ತು. ಇದಲ್ಲದೆ, ಮಂಗಳೂರಿನ ಕೇಯೂರು ನಲ್ಲಿರುವ ತಾಯಿ ಮನೆ, ದೇವನಹಳ್ಳಿಯ ಇಳತ್ತೋರೆ ನಲ್ಲಿರುವ ಮನೆ, ದೊಡ್ಡಬಳ್ಳಾಪುರದಲ್ಲಿ ಅಜಿತ್ ಗೆ ಸಂಬಂಧಿಸಿದ ಮನೆ, ಚಂದ್ರಾಲೇಔಟ್ ಮನೆಯಲ್ಲಿ ದಾಳಿ ನಡೆದಿತ್ತು.
ಇನ್ನು ತಹಶಿಲ್ದಾರ್ ಅಜಿತ್ ರೈಗೆ ಆಪ್ತನಾಗಿರುವ ಗೌರವ್ ಶೆಟ್ಟಿ ಮನೆ ಮೇಲೂ ದಾಳಿ ನಡೆದಿದೆ. ಬಸವೇಶ್ವರ ನಗರದ ಗೌರವ್ ಶೆಟ್ಟಿ ನೆ ಮೇಲೆ ದಾಳಿ ನಡೆದಿದ್ದು, ಬೆನಾಮಿ ಆಸ್ತಿ ಪತ್ತೆಯಾಗಿದೆ. ಇಷ್ಟು ಮಾತ್ರವಲ್ಲದೆ ಅಜಿತ್ ರೈ ಸಂಬಂಧಿಕರು,ಕುಟುಂಬಸ್ಥರು ಸೇರಿದಂತೆ ಆಪ್ತ ವಲಯದ ಹಲವು ಕಡೆ ದಾಳಿ ನಡೆದಿತ್ತು.
ಅಮಾನತುಗೊಂಡಿದ್ದ ಅಜಿತ್ ರೈ…
ಬಿಬಿಎಂಪಿ ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಹಕರಿಸಿದ ಅರೋಪದಡಿ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್.ಪುರ) ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈಯನ್ನ ಸರ್ಕಾರ 2022, ನವೆಂಬರ್ ನಲ್ಲಿ ಅಮಾನತು ಮಾಡಲಾಗಿತ್ತು. ಬಿಬಿಎಂಪಿ ವತಿಯಿಂದ ಮಹದೇವಪುರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತಿದ್ದರೂ ಇದಕ್ಕೆ ಕಾನೂನಾತ್ಮಕವಾಗಿ ತೊಡಕು ಉಂಟಾಗುತ್ತಿತ್ತು. ಈ ಪ್ರಕರಣದಲ್ಲಿ ತಹಶೀಲ್ದಾರ್ ಎಸ್. ಅಜಿತ್ ಕುಮಾರ್ ರೈ ಒತ್ತುವರಿದಾರರಿಗೆ ಸಹಕಾರ ನೀಡುವ ಮೂಲಕ ಕಾನೂನಾತ್ಮಕವಾಗಿ ತೆರವು ಮಾಡದಂತೆ ನೋಡಿಕೊಂಡಿದ್ದ.
ಒತ್ತುವರಿ ತೆರವು ಕಾರ್ಯಕ್ಕೆ ತಹಶೀಲ್ದಾರ್ ವತಿಯಿಂದ ನಿರಂತರ ತಕರಾರು ಉಂಟಾಗುವಂತೆ ಮಾಡಿದ್ದ. ಜತೆಗೆ ಒತ್ತುವರಿದಾರರು ನ್ಯಾಯಾಲಯಗಳಿಂದ ಸ್ಟೇ ಆದೇಶ ತರಲು ಕೂಡ ನೆರವಾಗಿದ್ದ. ಆದರೆ ಅಮಾನತು ಆದೇಶದ ವಿರುದ್ದ ಕೆ.ಎಟಿಯಲ್ಲಿ ಪ್ರಶ್ನಿಸಿ ತಡೆ ತೆರವು ಮಾಡಿದ್ದ ಅಜಿತ್ ರೈ ಮತ್ತೆ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್.ಪುರ) ತಹಶೀಲ್ದಾರ್ ಆಗಿ ನೇಮಕಗೊಂಡಿದ್ದ.