ಅನ್ನಭಾಗ್ಯ ಯೋಜನೆ: ಜುಲೈನಿಂದಲೇ 5 ಕೆಜಿ ಅಕ್ಕಿ ಬದಲಿಗೆ, ಹಣ ನೀಡಲು ಸಂಪುಟ ನಿರ್ಧಾರ
ಬೆಂಗಳೂರು: ಕರ್ನಾಟಕ ಸರ್ಕಾರವು ತನ್ನ ಚುನಾವಣಾ ಖಾತರಿಯನ್ನು ಪೂರೈಸಲು ಅಗತ್ಯವಾದ ದೊಡ್ಡ ಪ್ರಮಾಣದ ಅಕ್ಕಿಯನ್ನು ಸಂಗ್ರಹಿಸಲು ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34 ರೂ.ನಂತೆ ಹಣ ಪಾವತಿಸಲು ನಿರ್ಧರಿಸಿದೆ.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರವು ಉಚಿತವಾಗಿ ನೀಡುವ ಐದು ಕೆಜಿ ಅಕ್ಕಿ ಜೊತೆಗೆ ತಿಂಗಳಿಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿ ಸಂಗ್ರಹಿಸಲು ಸಾಧ್ಯವಾಗದ ಕಾರಣ ಜುಲೈನಿಂದಲೇ ಹಣ ಪಾವತಿ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
FCI (ಭಾರತೀಯ ಆಹಾರ ನಿಗಮ) ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳ ಪ್ರಮಾಣಿತ ದರವನ್ನು ನಿಗದಿಪಡಿಸಿರುವುದರಿಂದ ಪ್ರತಿಯೊಬ್ಬ ಫಲಾನುಭವಿಗೆ 34 ರುಪಾಯಿ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ ಅವರು, ನಾವು ಅಕ್ಕಿ ಪಡೆಯಲು ಪ್ರಯತ್ನಿಸಿದೆವು ಆದರೆ ನಮಗೆ ಅಗತ್ಯವಿರುವಷ್ಟು ಅಕ್ಕಿಯನ್ನು ಪೂರೈಸಲು ಯಾವುದೇ ಸಂಸ್ಥೆ ಮುಂದೆ ಬಂದಿಲ್ಲ. ಹೀಗಾಗಿ ಅಕ್ಕಿ ಖರೀದಿ ತಡವಾಗುತ್ತಿದೆ. ಹೀಗಾಗಿ ಅಕ್ಕಿ ಬದಲಿಗೆ ಹಣ ನೀಡಲು ಸಂಪುಟ ತೀರ್ಮಾನಿಸಿದೆ. ಇನ್ನು ಒಂದು ಕಾರ್ಡ್ನಲ್ಲಿ ಒಬ್ಬ ವ್ಯಕ್ತಿ ಇದ್ದರೆ, ಆ ವ್ಯಕ್ತಿಗೆ ಅನ್ನ ಭಾಗ್ಯ ಯೋಜನೆಯಡಿ ಐದು ಕೆಜಿ ಹೆಚ್ಚುವರಿ ಅಕ್ಕಿಗೆ ತಿಂಗಳಿಗೆ 170 ರೂ. ಸಿಗುತ್ತದೆ ಎಂದು ಸಚಿವರು ವಿವರಿಸಿದರು.