Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಬಿಜೆಪಿಗೆ ಆಪರೇಷನ್ ಕಮಲ ಮುಳುವು, ವಲಸಿಗರು ಪಕ್ಷಕ್ಕೆ ಬಂದ್ಮೇಲೆ ಅಶಿಸ್ತು: ಬಾಂಬೆ ಬಾಯ್ಸ್‌ ವಿರುದ್ಧ ಈಶ್ವರಪ್ಪ ಕಿಡಿ

ಹುಬ್ಬಳ್ಳಿ: ಬಿಜೆಪಿಯಲ್ಲಿ ಸದ್ಯ ಅಶಿಸ್ತು ಮೂಡಿದೆ, ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸಿಗರು ಬಂದ ನಂತರ ಪಕ್ಷದಲ್ಲಿ ಅಲ್ಪಸ್ವಲ್ಪ ಅಶಿಸ್ತು ಮೂಡಿದ್ದು, ಅಶಿಸ್ತು ತೋರುವವರ ಬಾಲವನ್ನು ಕಟ್‌ ಮಾಡ್ತೇವೆ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ  ಮಾತನಾಡಿದ ಕೆ.ಎಸ್.ಈಶ್ವರಪ್ಪ,  ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆಪರೇಷನ್ ಕಮಲ ಮುಳುವಾಯ್ತು. ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಕರೆದುಕೊಂಡು ಬಂದಿರುವುದಕ್ಕೆ ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಆಪರೇಷನ್ ಕಮಲದ ವಿರುದ್ಧ ಗರಂ ಆದರು.

ಬಿಜೆಪಿ ಪಕ್ಷದಲ್ಲಿ, ಅಲ್ಲಲ್ಲಿ ಶಿಸ್ತು ಕಳೆದು ಹೋಗಿದೆ. ಕಾಂಗ್ರೆಸ್​ನ‌ ಗಾಳಿ ಸೋಕಿರುವುದೇ ಇದಕ್ಕೆ ಕಾರಣ. ಬಹಿರಂಗವಾಗಿ ಅಡ್ಜೆಸ್ಟ್​ಮೆಂಟ್ ರಾಜಕಾರಣದ ಬಗ್ಗೆ ಚರ್ಚೆ ಆಗುತ್ತಿರುವುದು ದುರ್ದೈವ. ಇಂತಹದ್ದೆನ್ನಲ್ಲ ನಾಲ್ಕು ಗೋಡೆ ಮಧ್ಯೆ ಕೂತು ಮಾತನಾಡಬೇಕು. ಬಹಿರಂಗ ಹೇಳಿಕೆ ಕೊಡುವ ಬಗ್ಗೆ ಪಕ್ಷದ ನಾಯಕರೊಂದಿಗೆ ನಾನು ಮಾತನಾಡುತ್ತೇನೆ’ ಎಂದು ತಿಳಿಸಿದರು.

ಮೋಸ ಮಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿದ್ದ ಐದು ಗ್ಯಾರಂಟಿಗಳ ಬಗ್ಗೆ ಈವರೆಗೂ ಗೊಂದಲ ಬಗೆ ಹರಿದಿಲ್ಲ. ಗ್ಯಾರಂಟಿಳನ್ನು ಅನುಷ್ಠಾನ ಮಾಡುತ್ತೇವೆ ಎನ್ನುತ್ತಾ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವಂತ ಕೆಲಸ ಮಾಡುತ್ತಿದೆ ಎಂದು ಈಶ್ವರಪ್ಪ ಕಿಡಿಕಾರಿದರು.

ಮೊದಲ ಕ್ಯಾಬಿನೇಟ್​ನಲ್ಲೇ ನಿರುದ್ಯೋಗಿ ಯುವಕರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿ ಕೊಡುತ್ತಿರುವ ವಿಚಾರದಲ್ಲಿ ಯಾರೊಬ್ಬರೂ ಅಭಿನಂದನೆ ಸಲ್ಲಿಸುತ್ತಿಲ್ಲ. ಆದರೆ ಕೇಂದ್ರ ಅಕ್ಕಿ ನೀಡುತ್ತಿಲ್ಲ ಎಂದು ಗೂಬೆ ಕೂರಿಸುತ್ತಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ನಾಚಿಕೆಗೇಡಿನ‌ ಹೇಳಿಕೆ ನೀಡುತ್ತಾರೆ. ಇವರಿಗೆ ಸ್ವಲ್ಪವಾದರೂ ಜವಾಬ್ದಾರಿ ಇದೆಯಾ? ಎಂದು ಪ್ರಶ್ನಿಸಿದರು.

ಸರ್ಕಾರದ ಗ್ಯಾರಂಟಿ ಭರವಸೆಗಳ ವಿರುದ್ಧ ರಾಜ್ಯದ ಜನ ಆಕ್ರೋಶಗೊಂಡಿದ್ದಾರೆ. ಮಹಿಳೆಯರಿಗೆ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಹಣ ಯಾವ ರೀತಿ ಹೊಂದಿಸುತ್ತಾರೆ ಎಂದು ಈವರೆಗೂ ಸ್ಪಷ್ಟಪಡಿಸಿಲ್ಲ. ಕಾಂಗ್ರೆಸ್ ಸರ್ಕಾರದ ಈ ನ್ಯೂನತೆಗಳ ವಿರುದ್ಧ ಬಿಜೆಪಿ ಹೋರಾಟ ಹಮ್ಮಿಕೊಳ್ಳಲಿದೆ. ವಿದ್ಯುತ್ ದರ ಏರಿಕೆ ವಿಚಾರದಲ್ಲಿ ಸರ್ಕಾರ ಸ್ಪಷ್ಟನೆ ನೀಡಬೇಕು. ಮತಾಂತರ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ನಾವು ಜಾರಿ ಮಾಡಿದ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಲು ಕಾಂಗ್ರೆಸ್ ಹೊರಟಿದೆ ಎಂದು ಆರೋಪಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಕಾರ್ಯಕರ್ತರು ನಿರಾಶೆಯಲ್ಲಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಏಳು ತಂಡಗಳಲ್ಲಿ ಪ್ರವಾಸ ಕೈಗೊಂಡು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಲೋಕಸಭೆ ಚುನಾವಣೆಗೆ ಬಿಜೆಪಿ ಸಕಲ ರೀತಿಯಲ್ಲಿ ಸಿದ್ದತೆ ನಡೆಸುತ್ತಿದೆ ಎಂದು ಹೇಳಿದರು.

No Comments

Leave A Comment