
ಅನ್ನಭಾಗ್ಯ ಯೋಜನೆ ತಂದಿಟ್ಟ ಸಂಕಷ್ಟ: ಅಕ್ಕಿ ಇಲ್ಲ ಎಂದ ತೆಲಂಗಾಣ, ಛತ್ತೀಸ್ಗಢದತ್ತ ಮುಖ ಮಾಡಿದ ರಾಜ್ಯ ಸರ್ಕಾರ!
ಬೆಂಗಳೂರು: 5 ಗ್ಯಾರಂಟಿ ಯೋಜನೆಗಳ ಒಂದಾದ ಅನ್ನಭಾಗ್ಯ ಯೋಜನೆ ಜಾರಿಗೆ ತರುವುದು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರ್ನಾಟಕಕ್ಕೆ ನೀಡಲು ಅಗತ್ಯವಿರುವಷ್ಟು ಗುಣಮಟ್ಟದ ಅಕ್ಕಿಯ ದಾಸ್ತಾನು ಇಲ್ಲ ಎಂದು ನೆರೆಯ ತೆಲಂಗಾಣ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದ್ದು, ಇದೀಗ ಸರ್ಕಾರ ಛತ್ತೀಸ್ಗಢದತ್ತ ಮುಖ ಮಾಡಿದೆ.
ಅನ್ನಭಾಗ್ಯ ಯೋಜನೆ ಮಾಡಲು ರಾಜ್ಯ ಸರ್ಕಾರಕ್ಕೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಅಗತ್ಯವಿದೆ. ಈ ಪೈಕಿ ಛತ್ತೀಸ್ಗಢದಲ್ಲಿ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಲಭ್ಯವಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಈ ಅಕ್ಕಿಯನ್ನು ಖರೀದಿ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ 10ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಒಂದು ವೇಳೆ ಅಕ್ಕಿ ನೀಡಲು ಸಾಧ್ಯವಾಗದಿದ್ದರೆ, ಅಕ್ಕಿಯ ಪ್ರಮಾಣವನ್ನು ಇಳಿಸಿ, ಅದರ ಬದಲಾಗಿ ಜೋಳ ಮತ್ತು ರಾಗಿಯನ್ನು ಪರಿಹಾರವಾಗಿ ನೀಡುವ ಕುರಿತಂತೆಯೂ ಚಿಂತನೆಗಳು ನಡೆಯುತ್ತಿವೆ ಎಂದು ಮಲೂಗಳು ತಿಳಿಸಿವೆ.
ಅಕ್ಕಿ ಖರೀದಿ ಕುರಿತು ಈಗಾಗಲೇ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಛತ್ತೀಸ್ಗಢ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದ್ದಾರೆಂದು ಹೇಳಲಾಗುತ್ತಿದೆ.