ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ತಮಿಳು ನಾಡು ಇಂಧನ ಸಚಿವ ಸೆಂಥಿಲ್ ಬಾಲಾಜಿ ಇಡಿಯಿಂದ ಅರೆಸ್ಟ್: ಆಸ್ಪತ್ರೆಗೆ ಕರೆದೊಯ್ಯುವಾಗ ಬಿಕ್ಕಿಬಿಕ್ಕಿ ಅತ್ತ ಸಚಿವ!

ಚೆನ್ನೈ: ತಮಿಳು ನಾಡು ರಾಜಕೀಯದಲ್ಲಿ ಹೈಡ್ರಾಮಾ ನಡೆದಿದೆ. ತಮಿಳು ನಾಡು ಸರ್ಕಾರದ ಇಂಧನ ಸಚಿವ ಸಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ನಸುಕಿನ ಜಾವ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ(PMLA)ಬಂಧಿಸಲಾಗಿದೆ.

ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೀರ್ಘಕಾಲದವರೆಗೆ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದ್ದು ಈ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಚೆನ್ನೈಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು.

ಆಸ್ಪತ್ರೆಗೆ ಕರೆತರುವ ವೇಳೆ ಸೆಂಥಿಲ್ ಅವರು ಬೆಡ್ ಮೇಲೆ ಬಿದ್ದು ಹೊರಳಾಡಿ ಅಳುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸೆಂಥಿಲ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದ್ದು ಅದಕ್ಕೂ ಮುನ್ನ ಅವರನ್ನು ಇಂದು ಮಧ್ಯಾಹ್ನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

ಆರಂಭದಲ್ಲಿ ಸೆಂಥಿಲ್ ಬಾಲಾಜಿಯನ್ನು ಕೇಂದ್ರೀಯ ತನಿಖಾ ಸಂಸ್ಥೆ 18 ಗಂಟೆಗಳ ಕಾಲ ವಿಚಾರಣೆ ನಡೆಸಿ ವಶಕ್ಕೆ ತೆಗೆದುಕೊಂಡಿತು. ಮಧ್ಯರಾತ್ರಿ 2 ಗಂಟೆಗೆ ಸಚಿವರನ್ನು ವಶಕ್ಕೆ ಪಡೆಯುವಾಗ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಓಮಂದೂರಾರ್ ಎಸ್ಟೇಟ್‌ನಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ಕರೆತರುವಾಗ ಬಾಲಾಜಿ ಅಸ್ವಸ್ಥರಾಗಿ ಅಳುತ್ತಿರುವ ದೃಶ್ಯ ಸೆರೆಯಾಗಿದೆ.

ಅಕ್ರಮ ಹಣ ವರ್ಗಾವಣೆಯ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದ್ರಾವಿಡ ಮುನ್ನೇತ್ರ ಕಳಗಂನ ಕರೂರಿನ ಪ್ರಬಲ ವ್ಯಕ್ತಿಗೆ ಸಂಬಂಧಿಸಿದ ಸ್ಥಳದಲ್ಲಿ ಮತ್ತು ರಾಜ್ಯದ ಹಲವು ನಗರಗಳಲ್ಲಿ ಶೋಧ ನಡೆಸಿದ್ದರು.

ಸಚಿವ ಸೆಂಥಿಲ್ ವಿರುದ್ಧದ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮತ್ತು ಇಡಿ ತನಿಖೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ತಿಂಗಳುಗಳ ನಂತರ ಈ ಬೆಳವಣಿಗೆ ನಡೆದಿದೆ. ಇದೀಗ ಸೆಂಥಿಲ್ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರ ಅವರ ಕಿವಿಯ ಬಳಿ ಊತವಿದೆ, ಅವರ ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್) ನಲ್ಲಿ ವ್ಯತ್ಯಾಸವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಡಿಎಂಕೆ ಪಾಳಯದಲ್ಲಿ ಆತಂಕ: ಬಂಧನಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವರನ್ನು ಭೇಟಿ ಮಾಡಲು ಸಚಿವರಾದ ಪಿಕೆ ಸೇಕರ್ ಬಾಬು ಮತ್ತು ಉದಯನಿಧಿ ಸ್ಟಾಲಿನ್ ಆಸ್ಪತ್ರೆಗೆ ಧಾವಿಸಿದರು. ಸಚಿವ ಬಾಲಾಜಿಗೆ ಚಿತ್ರಹಿಂಸೆ ನೀಡಿದ ‘ಲಕ್ಷಣಗಳು’ ಇವೆ ಎಂದು ಸೇಕರ್ ಬಾಬು ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ಸೆಂಥಿಲ್ ಬಾಲಾಜಿ ಅವರನ್ನು ಭೇಟಿ ಮಾಡಿದ ನಂತರ ಮಾನವ ಸಂಪನ್ಮೂಲ ಮತ್ತು ಸಿಇ ಸಚಿವ ಸೇಕರ್ ಬಾಬು ಅವರು ವಿದ್ಯುತ್ ಸಚಿವರು ಪ್ರಜ್ಞಾಹೀನರಾಗಿದ್ದಾರೆ ಎಂದು ಹೇಳಿದರು. ಹಲವಾರು ಬಾರಿ ಅವರ ಹೆಸರನ್ನು ಕರೆದರೂ ಅವರು ಪ್ರತಿಕ್ರಿಯಿಸಲಿಲ್ಲ. ಅವರ ಕಾಲಿನಲ್ಲಿ ಊತವಿದೆ. ಅವರನ್ನು ಆಸ್ಪತ್ರೆಗೆ ಕರೆತಂದ ಸ್ಥಿತಿಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ತೋರಿಸುತ್ತದೆ ಎಂದು ಸೇಕರ್ ಬಾಬು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಕೆಟ್ಟ ರಾಜಕಾರಣವನ್ನು ವಿರೋಧಿಸುವವರ ವಿರುದ್ಧ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಕೇಂದ್ರ ಸರ್ಕಾರದ ಆದೇಶದಂತೆ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.

ಆಸ್ಪತ್ರೆಗೆ ಭೇಟಿ ನೀಡಿದ ಕಾನೂನು ಸಚಿವ ಎಸ್.ರೇಘುಪತಿ ಅವರು, ಬಾಲಾಜಿ ಅವರ ಮನೆಯಲ್ಲಿ ಗಂಟೆಗಟ್ಟಲೆ ಇಡಿ ದಾಳಿ ನಡೆಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಸಂಪುಟದ ಸಚಿವರಲ್ಲಿ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಕೂಡ ಸೇರಿದ್ದಾರೆ.

ಸಿಎಂ ಭೇಟಿ: ಚೆನ್ನೈನಲ್ಲಿ ರಾಜ್ಯ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಭೇಟಿ ಮಾಡಿದ ನಂತರ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಓಮಂದೂರರ್ ಸರ್ಕಾರಿ ಆಸ್ಪತ್ರೆಯಿಂದ ಹೊರಟರು. ಆಸ್ಪತ್ರೆಯ ಹೊರಗೆ ಹಾಜರಿದ್ದ ಡಿಎಂಕೆ ಕಾರ್ಯಕರ್ತರು ರಾಜ್ಯಪಾಲ ಆರ್ ಎನ್ ರವಿ ವಿರುದ್ಧ ಘೋಷಣೆ ಕೂಗಿದರು.

ಆಸ್ಪತ್ರೆಗೆ ಭೇಟಿ ನೀಡಿದ ಡಿಎಂಕೆ ವಕೀಲರು, ಬಾಲಾಜಿಯನ್ನು ಬಂಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಕ್ಷಣವೇ ಅಧಿಕೃತವಾಗಿ ಸ್ಪಷ್ಟಪಡಿಸಬೇಕೆಂದು ಇಡಿಗೆ ಒತ್ತಾಯಿಸಿದರು. ಓಮಂಡೂರರ್ ಆಸ್ಪತ್ರೆಯ ನೋಡಲ್ ಅಧಿಕಾರಿ ವಿ ಆನಂದ ಕುಮಾರ್, ಸೆಂಥಿಲ್ ಬಾಲಾಜಿ ರಕ್ತದೊತ್ತಡ ಮತ್ತು ಇಸಿಜಿಯಲ್ಲಿನ ವ್ಯತ್ಯಾಸಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರಿಗೆ ಯಾವುದೇ ಬಾಹ್ಯ ಗಾಯಗಳಾಗಿಲ್ಲ ಎಂದು ಹೇಳಿದರು.

ಅಬಕಾರಿ ಖಾತೆಯನ್ನು ಕೂಡ ಹೊಂದಿರುವ ಬಾಲಾಜಿ ವಿರುದ್ಧ ಉದ್ಯೋಗಕ್ಕಾಗಿ ನಗದು ಹಗರಣದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಪೊಲೀಸರು ಮತ್ತು ಇಡಿಗೆ ಅನುಮತಿ ನೀಡಿದ ನಂತರ ಈ ಬಂಧನವಾಗಿದೆ.

2011-15ರ ಅವಧಿಯಲ್ಲಿ ದಿವಂಗತ ಜೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರದಲ್ಲಿ ಸೆಂಥಿಲ್ ಬಾಲಾಜಿ ಸಾರಿಗೆ ಸಚಿವರಾಗಿದ್ದರು. ಇವರ ವಿರುದ್ಧ ಸಾರಿಗೆ ನಿಗಮದಲ್ಲಿ ಚಾಲಕರು ಮತ್ತು ಕಂಡಕ್ಟರ್‌ಗಳ ನೇಮಕಕ್ಕೆ ವಿವಿಧ ವ್ಯಕ್ತಿಗಳಿಂದ ಭಾರಿ ಮೊತ್ತದ ಲಂಚ ಪಡೆದಿದ್ದರು ಎಂಬ ದೂರುಗಳು ಬಂದಿದ್ದವು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ನಿಬಂಧನೆಗಳ ಅಡಿಯಲ್ಲಿ ಇಡಿ ಹುಡುಕಾಟ ನಡೆಸಿದೆ. ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಕೂಡ ರಾಜ್ಯದಲ್ಲಿ ಬಾಲಾಜಿ ಅವರ ಆಪ್ತ ಸಹಾಯಕರನ್ನು ಶೋಧಿಸಿತ್ತು.

ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನಂತರ ಈ ಬೆಳವಣಿಗೆ ನಡೆದಿದೆ. ಚೆನ್ನೈ ವಿಮಾನ ನಿಲ್ದಾಣದ ಹೊರಗೆ ಬೀದಿ ದೀಪಗಳು ಆಫ್ ಆಗಿದ್ದರಿಂದ ಭೇಟಿ ವಿವಾದಕ್ಕೆ ಒಳಗಾಗಿತ್ತು. ಇದು ಆಕಸ್ಮಿಕ ಎಂದು ಬಾಲಾಜಿ ಹೇಳಿದ್ದಾರೆ.

ಆರ್ ಎಎಫ್ ನಿಯೋಜನೆ: ತಮಿಳು ನಾಡು ಸರ್ಕಾರದ ರಾಜಕೀಯದಲ್ಲಿ ಇದು ದೊಡ್ಡ ಮಟ್ಟದ ಇಂದಿನ ಬೆಳವಣಿಗೆಯಾಗಿದ್ದು ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿಯನ್ನು ಆಸ್ಪತ್ರೆ ಬಳಿ ನಿಯೋಜಿಸಲಾಗಿದೆ.

ಅಕ್ರಮ ಹಣ ವರ್ಗಾವಣೆಯ ತನಿಖೆಯ ಭಾಗವಾಗಿ ಇಡಿ ಮಂಗಳವಾರ ಚೆನ್ನೈ, ಕರೂರ್ ಮತ್ತು ಈರೋಡ್‌ನಲ್ಲಿ ಸಚಿವ ಸೆಂಥಿಲ್ ಬಾಲಾಜಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿತ್ತು.

No Comments

Leave A Comment