ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಒಡಿಶಾ ರೈಲು ಅಪಘಾತ; ದುರಂತದಲ್ಲಿ ಮಡಿದವರ ಮೃತದೇಹಗಳನ್ನಿಟ್ಟಿದ್ದ ಶಾಲೆ ಕೆಡವಲು ಮುಂದಾದ ಸರ್ಕಾರ!

ಭುವನೇಶ್ವರ: ಜೂನ್ 2ರಂದು ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಇಡಲು ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದ್ದ 65 ವರ್ಷ ಹಳೆಯ ಬಹನಾಗ ಹೈಸ್ಕೂಲ್ ಕಟ್ಟಡವನ್ನು ಕೆಡವಲು ಒಡಿಶಾ ಸರ್ಕಾರ ಶುಕ್ರವಾರ ಆರಂಭಿಸಿದೆ.

ಶಾಲಾ ವ್ಯವಸ್ಥಾಪಕ ಸಮಿತಿ (ಎಸ್‌ಎಂಸಿ) ಸದಸ್ಯರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಯಿತು.

‘ಕಟ್ಟಡವು ಹಳೆಯದಾಗಿದೆ ಮತ್ತು ಸುರಕ್ಷಿತವಲ್ಲ. ಅಲ್ಲದೆ, ಶವಗಳನ್ನು ಇರಿಸಲಾಗಿರುವ ಶಾಲೆಯಲ್ಲಿ ತರಗತಿಗಳಿಗೆ ಹಾಜರಾಗಲು ಮಕ್ಕಳು ಹಿಂಜರಿಯುತ್ತಾರೆ ಎಂದು ಎಸ್ಎಂಸಿ ಹೇಳಿದ ನಂತರ ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ರೈಲು ಅಪಘಾತದಲ್ಲಿ ಮಡಿದವರ ಮೃತದೇಹಗಳನ್ನು ಅವರ ಕುಟುಂಬದವರು ಶಾಲೆಗೆ ಕೊಂಡೊಯ್ಯುತ್ತಿರುವ ಫೋಟೋಗಳು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿರುವುದರಿಂದ ಕಟ್ಟಡವನ್ನು ಕೆಡವುವಂತೆ ಪೋಷಕರು ಸಹ ಒತ್ತಾಯಿಸಿದ್ದರು.

ಎಸ್‌ಎಂಸಿಯ ನಿರ್ಧಾರ ಮತ್ತು ಪೋಷಕರು ಮತ್ತು ಸ್ಥಳೀಯರ ಮನವಿಯ ಆಧಾರದ ಮೇಲೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ, ಈಗಿರುವ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಿಸಲು ಅಸ್ತು ಎಂದರು.

ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಡಿಜಿಟಲ್ ತರಗತಿಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಮಾದರಿ ಶಾಲೆಯನ್ನಾಗಿ ಮಾಡುವ ಪ್ರಸ್ತಾವನೆಗೆ ಅವರು ಅನುಮೋದನೆ ನೀಡಿದರು.

ಗುರುವಾರ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರೇಯ ಭೌಸಾಹೇಬ್ ಶಿಂಧೆ, ಶಾಲಾ ಆಡಳಿತ ಸಮಿತಿಯು ಕಟ್ಟಡವನ್ನು ಕೆಡವಲು ಬಯಸಿದೆ ಎಂದು ಹೇಳಿದ್ದರು.

ಭಯ ಮತ್ತು ಮೂಢನಂಬಿಕೆಯನ್ನು ಹರಡಬೇಡಿ. ಬದಲಿಗೆ ಮಕ್ಕಳ ಮನಸ್ಸಿನಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದರು.

ಶಾಲಾ ಮತ್ತು ಸಮೂಹ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಸ್.ಅಶ್ವತಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸಲು ಅಧಿಕಾರಿಗಳು ಕೌನ್ಸೆಲಿಂಗ್ ಆಯೋಜಿಸುತ್ತಾರೆ ಎಂದರು.

ಜೂನ್ 2ರ ರೈಲು ಅಪಘಾತದ ಎರಡು ದಿನಗಳ ನಂತರ, ರಾಜ್ಯ ಸರ್ಕಾರವು ಶಾಲೆಯಿಂದ ಶವಗಳನ್ನು ಭುವನೇಶ್ವರದ ವಿವಿಧ ಆಸ್ಪತ್ರೆಗಳಿಗೆ ವರ್ಗಾಯಿಸಿತು.

200ಕ್ಕೂ ಹೆಚ್ಚು ಶವಗಳನ್ನು ಇದುವರೆಗೆ ಗುರುತಿಸಲಾಗಿದೆ ಮತ್ತು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಸುಮಾರು 80 ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ ಮತ್ತು ಅವುಗಳನ್ನು ಭುವನೇಶ್ವರದ ಏಮ್ಸ್ ಶವಾಗಾರದಲ್ಲಿ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋರಮಂಡಲ್ ಎಕ್ಸ್‌ಪ್ರೆಸ್ ಜೂನ್ 2 ರಂದು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಅದರ ಹೆಚ್ಚಿನ ಬೋಗಿಗಳು ಹಳಿತಪ್ಪಿದವು. ಬಳಿಕ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ 288 ಮಂದಿ ಸಾವಿಗೀಡಾಗಿದ್ದು, 1200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

No Comments

Leave A Comment