ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಗ್ಯಾರಂಟಿ ಕ್ರಾಂತಿ: ವಿಧಾನಸಭೆ, ಲೋಕಸಭಾ ಚುನಾವಣೆಗೆ ಕಾಂಗ್ರೆಸ್’ಗೆ ಹೊಸ ಅಸ್ತ್ರ, ಬಿಜೆಪಿ-ಜೆಡಿಎಸ್ ತಬ್ಬಿಬ್ಬು!

ಮೈಸೂರು: ಸಿದ್ದರಾಮಯ್ಯ ಸರ್ಕಾರದ 5 ಗ್ಯಾರಂಟಿಗಳ ಘೋಷಣೆ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲು ಸಹಕಾರಿಯಾಗಿದ್ದು, ಈ ಘೋಷಣೆ ರಾಜ್ಯದಲ್ಲಷ್ಟೇ ರಾಷ್ಟ್ರ ರಾಜಕಾರಣದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಇತರೆ ರಾಜ್ಯಗಳಲ್ಲೂ ವಿಧಾನಸಭಾ ಚುನಾವಣೆಗಳು ಎದುರಾಗಲಿವೆ. ಒಂದು ವೇಳೆ ಕಾಂಗ್ರೆಸ್  5 ಗ್ಯಾರಂಟಿಗಳ ಘೋಷಣೆ ಮಾಡದೇ ಹೋಗಿದ್ದರೆ ಇದನ್ನು ದಾಳವಾಗಿ ಬಳಸಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್ ತಂತ್ರಗಳ ರೂಪಿಸಿತ್ತು. ಆದರೀಗ ಸರ್ಕಾರ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಪಕ್ಷವನ್ನು ಎದುರಿಸುವುದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕರ್ನಾಟಕದ ಉಚಿತ ಗ್ಯಾರಂಟಿಗಳ ಮಾದರಿಯಿಂದ ಪ್ರೇರಣೆ ಪಡೆದು ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯ ನಿರೀಕ್ಷೆಯಲ್ಲಿರುವ ರಾಜಸ್ಥಾನದಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರವು ಕೂಡಲೇ ಜಾರಿಗೆ ಬರುವಂತೆ 100 ಯುನಿಟ್ ಗಳವರೆಗೆ ಉಚಿತ ವಿದ್ಯುತ್ ಪ್ರಕಟ ಮಾಡಿದೆ. ಜೊತೆಗೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಉಚಿತ ಕೊಡುಗೆಗಳ ಘೋಷಣೆ ಜೋರಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ನಿರೀಕ್ಷೆಗಿಂತಲೂ ವೇಗ ಾಗೂ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಘೋಷಣೆ ಮಾಡಿದೆ. ಈ ಮೂಲಕ ಹೊಸ ಕರ್ನಾಟಕ ಮಾದರಿ ರಾಜಕೀಯಕ್ಕೆ ಮುನ್ನುಜಿ ಬರೆದಿದ್ದು, ಕರ್ನಾಟಕ ಗ್ಯಾರಂಟಿ ಮಾದರಿಯ ಬೇರೆ ರಾಜ್ಯಗಳಿಗೂ ಮಾದರಿಯಾಗಿ ರಾಷ್ಟ್ರ ರಾಜಕೀಯದಲ್ಲಿ ಸ್ಥಿತ್ಯಂತರ ಸೃಷ್ಟಿಸುವ ಸಾಧ್ಯತೆಗಳಿವೆ. ಮತದಾರರು ಗ್ಯಾರಂಟಿ ಯೋಜನೆಗಳಿಗೆ ಈ ಪರಿ ಮನ ಸೋಲುವುದು ಖಾತ್ರಿಯಾಗಿರುವುದರಿಂದ ಬೇರೆ ರಾಜ್ಯಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಇದೇ ಉಚಿತ ಗ್ಯಾರಂಟಿಗಳ ಮೊರೆ ಹೋಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ದೇಶದಾದ್ಯಂತ ತನ್ನ ಶಕ್ತಿಯನ್ನು ಪ್ರದರ್ಶಿಸಿ ಬಿಜೆಪಿ ಪ್ರಬಲ ಪಕ್ಷವಾಗಿ ಬೆಳೆದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. 2024ರ ಚುನಾವಣೆಯಲ್ಲಿ ಇದೇ ರೀತಿಯ ಫಲಿತಾಂಶ ಪಡೆಯುವ ಉತ್ಸಾಹದಲ್ಲಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಬಿಜೆಪಿಯ ಹೆಬ್ಬಾಗಿಲು ಎಂದೇ ಪರಿಗಣಿಸಲಾಗುತ್ತಿದೆ.

ರಾಜಕೀಯ ವಿಮರ್ಶಕ ಮುಜಾಫರ್ ಅಸಾದಿ ಮಾತನಾಡಿ, ಆಡಳಿತಾರೂಢ ಕಾಂಗ್ರೆಸ್ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ತಂತ್ರಗಳನ್ನು ಮುಂದುವರಿಸಬೇಕು. ಎಲ್ಲಾ ಹಂತಗಳಲ್ಲಿ ಭ್ರಷ್ಟಾಚಾರವನ್ನು ತಡೆಯಲು ಶ್ರಮಿಸಬೇಕು. ಐದು ಗ್ಯಾರಂಟಿ ಯೋಜನಗಳ ಜನರಿಗೆ ತಲುಪಿಸುವಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಬೇಕೆಂದು ಹೇಳಿದ್ದಾರೆ.

ಇನ್ನು ಬಿಜೆಪಿ ಪಕ್ಷವನ್ನು ಸಂಘಟಿಸುವ ಪ್ರಯತ್ನವನ್ನು ಮರಳಿ ಆರಂಭಿಸಬೇಕು. ಪಕ್ಷದಿಂದ ದೂರ ಉಳಿದಿರುವ ವೀರಶೈವ-ಲಿಂಗಾಯತ ಮತ್ತು ಇತರ ಜಾತಿಗಳನ್ನು ಮರಳಿ ತನ್ನತ್ತ ಸೆಳೆಯುವತ್ತ ಶ್ರಮಿಸಬೇಕು. ಪಕ್ಷದಲ್ಲಿರುವ ನಾಯಕತ್ವದ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ಆಂತರಿಕ ಕಚ್ಚಾಟವನ್ನು ಕೊನೆಗೊಳಿಸಬೇಕು ಎಂದು ತಿಳಿಸಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಪರಿಣಾಮಕಾರಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಮತ್ತು ಕರ್ನಾಟಕ ರಾಜಕೀಯದಲ್ಲಿ ತಮ್ಮ ಸ್ಥಾನಗಳನ್ನು ಮರಳಿ ಪಡೆಯಲು ಕಾರ್ಯಸೂಚಿಯನ್ನು ಹೊಂದಬೇಕು ಎಂದು ಹೇಳಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಜಿ ಮಧುಸೂಧನ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಪಕ್ಷವು ರಾಷ್ಟ್ರೀಯ ವಿಷಯಗಳನ್ನು ಹಿಡಿದು ಕಣಕ್ಕಿಳಿಯಲಿದೆ. ಕೆಲ ಕಾಂಗ್ರೆಸ್ ನಾಯಕರು ಭಾಗಿಯಾಗಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಪ್ರಸ್ತಾಪಿಸುತ್ತೇವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕ ಪ್ರವಾಸದ ವೇಳೆ ಮೋದಿ ಸರ್ಕಾರದ ವಿರುದ್ಧ ನೀಡಿರುವ ಹೇಳಿಕೆಗಳು, ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುತ್ತಿದ್ದಾರೆ ಎಂಬ ಅವರ ಆರೋಪ, ಭಯೋತ್ಪಾದಕ ಸಂಘಟನೆಗಳೊಂದಿಗೆ ಎಸ್‌ಡಿಪಿಐ-ಪಿಎಫ್‌ಐ ನಂಟು ಮತ್ತಿತರ ವಿಚಾರಗಳನ್ನು ಬಿಜೆಪಿ ಪ್ರಸ್ತಾಪಿಸಲಿದೆ ಎಂದು ಹೇಳಿದ್ದಾರೆ.

No Comments

Leave A Comment