ಕುಸ್ತಿಪಟುಗಳಿಗೆ ನ್ಯಾಯ ಒದಗಿಸಲಾಗುವುದು, ಪೊಲೀಸರಿಂದ ಶೀಘ್ರವೇ ಚಾರ್ಜ್ ಶೀಟ್ ಸಲ್ಲಿಕೆ: ಅನುರಾಗ್ ಠಾಕೂರ್
ನವದೆಹಲಿ: ಲೈಂಗಿಕ ದುರ್ವರ್ತನೆ ಆರೋಪದ ಮೇಲೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೇಶದ ಅಗ್ರ ಕುಸ್ತಿಪಟುಗಳ ನಿರಂತರ ಪ್ರತಿಭಟನೆಯ ನಡುವೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ, ಪೊಲೀಸರು ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಿದ್ದು, ಕುಸ್ತಿಪಟುಗಳಿಗೆ ನ್ಯಾಯ ಸಿಗಲಿದೆ ಎಂದಿದ್ದಾರೆ.
ಇಲ್ಲಿ ನಡೆದ ಎಕನಾಮಿಕ್ ಸಮಾವೇಶದಲ್ಲಿ ಮಾತನಾಡಿದ ಠಾಕೂರ್, ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.
ದಿನನಿತ್ಯದ ವ್ಯವಹಾರಗಳನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ರಚಿಸಿರುವ ನಿರ್ವಾಹಕರ ಸಮಿತಿಯು ನೋಡಿಕೊಳ್ಳುತ್ತಿರುವುದರಿಂದ ಡಬ್ಲ್ಯುಎಫ್‌ಐ ತನ್ನ ಯಾವುದೇ ದಿನನಿತ್ಯದ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ. ಸದ್ಯದಲ್ಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದ್ದು, ಕುಸ್ತಿಪಟುಗಳಿಗೆ ನ್ಯಾಯ ಸಿಗಲಿದೆ ಎಂದರು.
ಸೂಕ್ತ ಸಮಯದಲ್ಲಿ ನ್ಯಾಯ ಸಿಗಲಿದೆ. ಮಹಿಳೆಯರ ವಿರುದ್ಧ ನಡೆಯುವ ಯಾವುದೇ ಅಪರಾಧಕ್ಕೆ ತ್ವರಿತ ನ್ಯಾಯ ಸಿಗಬೇಕು ಎಂದು ಸಚಿವರು ಹೇಳಿದರು.