ಬನ್ನೇರುಘಟ್ಟ: ಆನೆ ತುಳಿತಕ್ಕೆ ಬುಡಕಟ್ಟು ಸಮುದಾಯದ ಮಹಿಳೆ ಬಲಿ
ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (ಬಿಎನ್‌ಪಿ)ಲ್ಲಿ ಆನೆ ದಾಳಿಗೆ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ನಾಗಮ್ಮ (45) ಆನೆ ತುಳಿತಕ್ಕೆ ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ಘಟನೆ ನಡೆದ ಸ್ಥಳವು ಬನ್ನೇರುಘಟ್ಟ ಜೈವಿಕ ಉದ್ಯಾನವನದ (ಬಿಬಿಪಿ) ನಿಯಂತ್ರಣ ಮತ್ತು ನಿರ್ವಹಣೆಯಲ್ಲಿದೆ ಎಂದು ತಿಳಿದುಬಂದಿದೆ.
ಮೃತ ಮಹಿಳೆ ನಾಗಮ್ಮ ಅವರು, ಒಂದು ವರ್ಷದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿರುವ ಕುಮಾರ್ ಅವರ ತಾಯಿಯಾಗಿದ್ದಾರೆ. ಕುಮಾರ್ ಅವರು ಮೃಗಾಲಯದಲ್ಲಿರಾತ್ರಿ ವೇಳೆ ವಾಚರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಆನೆಗಳು ಮೃಗಾಲಯದ ಪ್ರದೇಶದಲ್ಲಿ ಅಲೆದಾಡದಂತೆ ನೋಡಿಕೊಳ್ಳುವುದು ಕುಮಾರ್ ಅವರ ಕಾರ್ಯವಾಗಿದೆ.
ಘಟನೆ ನಡೆದಾಗ ನಾಗಮ್ಮ ತನ್ನ ಮಗನನ್ನು ಭೇಟಿ ಮಾಡಲು ಆಹಾರದೊಂದಿಗೆ ಅರಣ್ಯ ಪ್ರದೇಶದ ಮೂಲಕ ನಡೆದು ಬರುತ್ತಿದ್ದರು ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.