ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಸಿದ್ದರಾಮಯ್ಯ ನೇತೃತ್ವದಲ್ಲಿಂದು ಮೊದಲ ಸಂಪುಟ ಸಭೆ: 5 ಗ್ಯಾರಂಟಿಗಳತ್ತ ಎಲ್ಲರ ಚಿತ್ತ

ಬೆಂಗಳೂರು: ಶನಿವಾರದಿಂದ ರಾಜ್ಯದಲ್ಲಿ ಹೊಸ ಸರ್ಕಾರ ಆಡಳಿತ ನಡೆಸಲಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಂದು ವಿಧಾನಸೌಧದಲ್ಲಿ ಮೊದಲ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ರಾಜ್ಯದ ಜನರ ಚಿತ್ತ 5 ಗ್ಯಾರಂಟಿಗಳತ್ತ ನೆಟ್ಟಿದೆ.

ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಈ ಗ್ಯಾರಂಟಿಗಳನ್ನು ಮೊದಲ ಸಂಪುಟ ಸಭೆಯಲ್ಲಿಯೇ ಜಾರಿ ಮಾಡುವುದಾಗಿ ಹೇಳಿದ್ದರು. ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ರೂ. 2,000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್​ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ ರೂ.3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ.1,500 ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ಬಿಪಿಎಲ್ ಕಾರ್ಡ್​ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆಯ ಒಟ್ಟು ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಸಂಪುಟ ಸಭೆಯು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡಲಿದ್ದಾರೆ. ಇದರ ಜೊತೆಗೆ ಸುಮಾರು 8 ಮಂತ್ರಿಗಳೂ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಆ ಮೂಲಕ ಇಂದಿನಿಂದ ಕಾಂಗ್ರೆಸ್ ರಾಜ್ಯಭಾರ ಆರಂಭವಾಗಲಿದೆ.

ಗ್ಯಾರಂಟಿಗಳಿಗೆ ಷರತ್ತಿನ ಭೀತಿ
ಸಂಪುಟ ಸಭೆಯಲ್ಲಿ ಐದೂ ಗ್ಯಾರಂಟಿಗಳಿಗೆ ಅಸ್ತು ನೀಡಲಾಗುತ್ತಾ ಅಥವಾ ಉಚಿತ ವಿದ್ಯುತ್ ಗ್ಯಾರಂಟಿ, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಮಾತ್ರ ಅನುಮೋದನೆ ನೀಡಲಾಗುತ್ತಾ ಎಂಬ ಪ್ರಶ್ನೆಗಳು ಮೂಡಿವೆ. ಉಳಿದ ಗ್ಯಾರಂಟಿಗಳನ್ನು ಸಂಬಂಧಿತ ಇಲಾಖೆಗಳಿಂದ ಸ್ಪಷ್ಟ ರೂಪುರೇಷೆಯನ್ನು ಪಡೆದ ಬಳಿಕ ಜಾರಿಗೊಳಿಸುವ ಸಾಧ್ಯತೆನೂ ಇದೆ.

ಈ ಮಧ್ಯೆ ಈ ಐದೂ ಗ್ಯಾರಂಟಿಗಳಿಗೆ ಷರತ್ತು ಅನ್ವಯಿಸುವ ಭೀತಿ ರಾಜ್ಯದ ಜನರಲ್ಲಿ ಕಾಡುತ್ತಿದೆ. ಹಾಗಾಗಿ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಷರತ್ತಿನೊಂದಿಗೆ ಗ್ಯಾರಂಟಿಗಳಿಗೆ ಅನುಮೋದನೆ ನೀಡುತ್ತ ಎಂಬುದು ಎಲ್ಲರಿಗಿರುವ ಅನುಮಾನವಾಗಿದೆ. ಈಗಾಗಾಲೇ ಕೆಲ ಕಾಂಗ್ರೆಸ್ ನಾಯಕರು ಷರತ್ತು ವಿಧಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ಗ್ಯಾರಂಟಿಗಳು ಎಲ್ಲರಿಗೂ ಅನ್ವಯವಾಗುತ್ತಾ ಅಥವಾ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಅನ್ವಯವಾಗುತ್ತಾ ಎಂಬ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಇಂದು ನಡೆಯಲಿರುವ ಸಂಪುಟ ತೀರ್ಮಾನ ಈ ಎಲ್ಲಾ ಅನುಮಾನ, ಆತಂಕ, ಪ್ರಶ್ನೆಗಳಿಗೆ ತೆರೆ ಎಳೆಯುವ ಸಾಧ್ಯತೆಯಿದೆ.

No Comments

Leave A Comment