Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ಚುನಾವಣೆ ಹೀನಾಯ ಸೋಲು: ನಳೀನ್ ಕುಮಾರ್ ಕಟೀಲ್, ಸದಾನಂದಗೌಡ ಫೋಟೋಗಳಿಗೆ ಚಪ್ಪಲಿಹಾರ ಹಾಕಿ ಆಕ್ರೋಶ, ಫೋಟೋ ವೈರಲ್

ಮಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನಿಂದ ಆಕ್ರೋಶಗೊಂಡಿರುವ ಕಾರ್ಯಕರ್ತರು ಪಕ್ಷದ ನಾಯಕರಿಗೆ ಚಪ್ಪಲಿಹಾರ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು.. ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಪುತ್ತೂರು ಸೇರಿದಂತೆ ರಾಜ್ಯದೆಲ್ಲೆಡೆ ಬಿಜೆಪಿ ಹೀನಾಯ ಸೋಲನುಭವಿಸುವ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಇದರಿಂದ ಬೇಸತ್ತ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹಾಗೂ ಡಿ.ವಿ.ಸದಾನಂದ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪುತ್ತೂರಿನ ಬಸ್‌ ನಿಲ್ದಾಣದ ಬಳಿ ನಡೆದಿದೆ.

ಈಗಾಗಲೇ ರಾಜ್ಯದೆಲ್ಲೆಡೆ ಬಿಜೆಪಿ ಸೋಲುಂಡಿದ್ದು, ಇದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಪ್ರಮುಖವಾಗಿ ಘಟಾನುಘಟಿ ಬಿಜೆಪಿ ನಾಯಕರೇ ಸೋಲು ಕಂಡಿರುವುದು ಆಶ್ಚರ್ಯ ಮೂಡಿಸಿದೆ. ಇದನ್ನೆಲ್ಲ ಗಮನಿಸಿದರೆ ಬಿಜೆಪಿ ಕಾರ್ಯಕರ್ತರೇ ಪುತ್ತೂರಿನಲ್ಲಿ ಬಿಜೆಪಿ ನಾಯಕರ ಭಾವಪೂರ್ಣ ಶ್ರದ್ಧಾಂಜಲಿ ಬ್ಯಾನರ್ ಮಾಡಿಸಿದ್ದು, ಅದರಲ್ಲಿರುವ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಪುತ್ತೂರು ಸೇರಿದಂತೆ ರಾಜ್ಯದಂತ ಬಿಜೆಪಿ ಸೋಲಲು ನಳಿನ್ ಕುಮಾರ್ ಕಟೀಲ್ ಅವರ ವೈಯಕ್ತಿಕ ಹಿತಾಸಕ್ತಿ ಮತ್ತು ಅಸಮರ್ಥ ನಾಯಕತ್ವವೇ ಕಾರಣ ಎಂದು ಕಳೆದ ಕೆಲ ಸಮಯದಿಂದ ಸ್ವತಃ ಬಿಜೆಪಿ ಕಾರ್ಯಕರ್ತರೇ ಸಾಮಾಜಿಕ ಜಾಲತಾಣ ಸೇರಿದಂತೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದೀಗ ಅದರ ಮುಂದುವರಿದ ಭಾಗವಾಗಿ ಕಿಡಿಗೇಡಿಗಳು ನಳಿನ್ ಕುಮಾರ್ ಕಟೀಲ್ ಮತ್ತು ಸಂಸದ ಡಿವಿ ಸದಾನಂದ ಗೌಡ ಅವರ ಫೋಟೋ ಇರುವ ಬ್ಯಾನರ್ ಹಾಕಿ ಶ್ರದ್ದಾಂಜಲಿ ವಿಕೃತಿ ಮೆರೆಯಲಾಗಿದೆ.

ಅಷ್ಟೇ ಅಲ್ಲದೆ “ಬಿಜೆಪಿ ಹೀನಾಯವಾಗಿ ಸೋಲಲು ಕಾರಣರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ” ಅಂತಾ ಬ್ಯಾನರ್‌ನಲ್ಲಿ ಬರೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಬ್ಯಾನರ್‌ ಅನ್ನು ನೊಂದ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಅಳವಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪುತ್ತೂರಿನಲ್ಲಿ ಬಿಜೆಪಿ ಟಿಕೆಟ್‌ ಸಿಗದ ಹಿನ್ನೆಲೆ ಹಿಂದೂ ಮುಖಂಡ ಅರುಣ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದು, ಅವರು ಕಾಂಗ್ರೆಸ್ ವಿರುದ್ದ 4 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು. ಮತ್ತೊಂದೆಡೆ ಇದೇ ಕ್ಷೇತ್ರದಲ್ಲಿ ಬಿಜೆಪಿಯು ಕೂಡ ಕಡಿಮೆ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಬಿಜೆಪಿ ಸೋಲಿಗೆ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಸದಾನಂದಗೌಡ ಅವರೇ ಕಾರಣ ಅಂತಾ ಕಿಡಿಕಾರುತ್ತಿದ್ದಾರೆ.

No Comments

Leave A Comment