Log In
BREAKING NEWS >
ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಗುರುವಾರದ೦ದು ಅದ್ದೂರಿಯ ಅಕ್ಕಿಮುಹೂರ್ತ ಕಾರ್ಯಕ್ರಮ ಸ೦ಪನ್ನ.....

ಕರ್ನಾಟಕದಲ್ಲಿ ಮತ್ತೆ ಐಟಿ ದಾಳಿ: ಮಂಡ್ಯ, ಕಲಬುರಗಿ, ಹಾವೇರಿ ಸೇರಿ ಹಲವೆಡೆ ದಾಳಿ, ದಾಖಲೆ ಪರಿಶೀಲನೆ

ಬೆಂಗಳೂರು: ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಕ್ಕೆ ಇನ್ನೆರಡು ದಿನ ಬಾಕಿ ಇರುವಂತೆ ರಾಜ್ಯದ ನಾನಾ ಕಡೆ ಮತ್ತೆ ಆದಾಯ ತೆರಿಗೆ ಅಧಿಕಾರಿಗಳು (ಐಟಿ) ಹಾಗೂ ಚುನಾವಣಾಧಿಕಾರಿಗಳು ಮಿಂಚಿನ ದಾಳಿ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಎನ್ನಲಾದ ನಗದು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಮಂಡ್ಯ, ಕಲಬುರಗಿ, ಹಾವೇರಿ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಕೋಟ್ಯಂತರ ರೂ. ನಗದು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಕೊನೆ ಕ್ಷಣದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದೆ ಎಂಬ ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಅವರ ಬೆಂಬಲಿಗರ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ 2 ಕೋಟಿ ರೂ.ಗೂ ಅಧಿಕ ಹಣ ಪತ್ತೆ ಹಚ್ಚಿದ್ದಾರೆ.

ಇತ್ತ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಇಳಕಲ್‍ನಲ್ಲಿ ಉದ್ಯಮಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗ್ರಾನೈಟ್ ಮತ್ತು ಜವಳಿ ಉದ್ಯಮಿಗಳಾದ ರಾಜು ಬೋರ ಸೇರಿದಂತೆ ಇಬ್ಬರ ಮೇಲೆ ದಾಳಿ ನಡೆಸಲಾಗಿದೆ. ಇವರು ರಾಜಕೀಯ ಪಕ್ಷವೊಂದಕ್ಕೆ ಸೇರಿದ ಅಭ್ಯರ್ಥಿಗಳ ಪರವಾಗಿ ಹಂಚಲು ಹಣವನ್ನು ಸಂಗ್ರಹಿಸಿಟ್ಟಿದ್ದರು ಎಂಬ ಆರೋಪದ ಮೇಲೆ ದಾಳಿ ಮಾಡಲಾಗಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲತ್ತಿ ಮನೆ ಮೇಲೆ ದಾಳಿ ನಡೆಸಿ ಐಟಿ ಅಕಾರಿಗಳು 2.85 ಕೋಟಿ ರೂ. ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಜಿಲ್ಲೆಯಲ್ಲೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಆಪ್ತ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚೌಹಾಣ್ ಅವರ ಮನೆ, ಹೋಟೆಲ್, ಕ್ರಷರ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ರಾಜಕೀಯ ಪ್ರೇರಿತ ದಾಳಿ: ಕಾಂಗ್ರೆಸ್ ಆಕ್ರೋಶ
ಇದಕ್ಕೆ ಅರವಿಂದ್ ಚೌಹಾಣ್ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ಕೀಳುಮಟ್ಟಕ್ಕೆ ಇಳಿದು ಐಟಿ ದಾಳಿ ನಡೆಸಿದೆ. ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವುದಕ್ಕೆ ಐಟಿ ರೇಡ್ ಮಾಡಲಾಗಿದೆ. ಬಿಜೆಪಿ ತನ್ನ ಸಿದ್ಧಾಂತಗಳನ್ನು ಮಾರಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‍ನಲ್ಲಿ ಸಕ್ರಿಯರಾಗಿಬಿಟ್ಟರೆ ತೊಂದರೆ ಕೊಡುತ್ತೇವೆ ಎಂಬ ಸಂದೇಶ ನೀಡಲು ಅರವಿಂದ್ ಚೌಹಾಣ್ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಚುನಾವಣೆ ಸೋಲುತ್ತದೆ. ಸೋಲುವ ಭಯ ಆರಂಭವಾದಾಗ ಸರ್ಕಾರಿ ಏಜನ್ಸಿಗಳನ್ನು ಬಳಕೆ ಮಾಡುತ್ತಾರೆ. ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಐಟಿ ಅಸ್ತ್ರ ಬಳಸಿದ್ದಾರೆ. ಕಾಂಗ್ರೆಸ್ ಬೆಂಬಲಿಗರು, ಕಾರ್ಯಕರ್ತರ ಮನೆ ಮೇಲೆ ಐಟಿ ದಾಳಿ ನಡೆದಿದೆ. ವಾಹೀದ್ ಅಲಿ, ಮಹಮ್ಮದ್ ಜಗೀರದಾರ್, ಅರವಿಂದ್ ಚೌಹಾಣ್ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂದು ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ.

No Comments

Leave A Comment