Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

‘ಸಿಎಂ ಹುದ್ದೆಗೆ 2,500 ಕೋಟಿ ರೂ, ಸಚಿವ ಸ್ಥಾನಕ್ಕೆ 500 ಕೋಟಿ ರೂ, ಇದು ಬಿಜೆಪಿ ಸರ್ಕಾರದ ಭ್ರಷ್ಟಾಚಾರ ರೇಟ್ ಕಾರ್ಡ್’: ಕಾಂಗ್ರೆಸ್ ನಿಂದ ಗಂಭೀರ ಆರೋಪ

ನವದೆಹಲಿ/ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಬಾಕಿ ಉಳಿದಿರುವುದು ಕೇವಲ 4 ದಿನ. ಬಹಿರಂಗ ಪ್ರಚಾರಕ್ಕೆ ಇನ್ನು ಮೂರು ದಿನ ಉಳಿದಿದೆ. ಈ ಹೊತ್ತಿನಲ್ಲಿ ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದೆ.

ಕಾಂಗ್ರೆಸ್ ಇಂದು ಪೋಸ್ಟ್‌ಗಳು ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತುಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡುವ ಮೂಲಕ ಬಿಜೆಪಿ ಸರ್ಕಾರ ವಿರುದ್ಧ ಸಾಲುಸಾಲು ಭ್ರಷ್ಟಾಚಾರ ಆರೋಪ ಮಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ವಕ್ತಾರ ಪವನ್ ಖೇರಾ, ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು 2,500 ಕೋಟಿ ರೂಪಾಯಿಗಳಿಗೆ ಮತ್ತು ಸಚಿವ ಸ್ಥಾನಗಳು 500 ಕೋಟಿ ರೂಪಾಯಿಗಳಿಗೆ ಮಾರಟವಾಗಲು ಸಿದ್ಧವಾಗಿದೆ ಎಂದು ಆರೋಪಿಸಿದರು.

ಬಿಜೆಪಿಯನ್ನು ‘40% ಸರ್ಕಾರ’ ಎಂದು ಕರೆಯಲು ಕಾರಣವಿದೆ. ಕರ್ನಾಟಕದಲ್ಲಿ ಸಮಾಜದ ಪ್ರತಿಯೊಂದು ವರ್ಗವೂ ಈ 40% ಕಮಿಷನ್ ಸರ್ಕಾರದ ಕಪಿಮುಷ್ಠಿಯಲ್ಲಿದೆ. ಭಾರತದ ಅತ್ಯಂತ ಧಾರ್ಮಿಕ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷವು ಮಠಗಳಿಗೆ ಅನುದಾನ ಬಿಡುಗಡೆ ಮಾಡಲು 30% ಕಮಿಷನ್ ವಿಧಿಸುತ್ತದೆ, ಬಿಜೆಪಿ ‘ಭ್ರಷ್ಟಾಚಾರ ರೇಟ್ ಕಾರ್ಡ್’ ಪಕ್ಷ ಎಂದು ಟೀಕಿಸಿದರು.

ಮಣಿಪುರ ರಾಜ್ಯ ಅಕ್ಷರಶಃ ಹೊತ್ತಿ ಉರಿಯುತ್ತಿರುವ ಈ ಹೊತ್ತಿನಲ್ಲಿ ಪ್ರಧಾನಿ ಮೋದಿ ಅವರು ಕರ್ನಾಟಕದಲ್ಲಿ ಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದಾರೆ. ಇದು ಬಿಜೆಪಿ ಸರ್ಕಾರದ ತಪ್ಪು ಆದ್ಯತೆಯನ್ನು ತೋರಿಸುತ್ತದೆ ಎಂದರು.

ಕರ್ನಾಟಕದಲ್ಲಿ ನಿರ್ಗಮಿಸುತ್ತಿರುವ ಬಿಜೆಪಿ ಸರ್ಕಾರವನ್ನು ‘ಭ್ರಷ್ಟ’ ಎಂದು ಬಣ್ಣಿಸಿರುವ ಕಾಂಗ್ರೆಸ್, ದಕ್ಷಿಣ ರಾಜ್ಯದಲ್ಲಿ ಅದು ‘ಆಡಳಿತವನ್ನು ಮಾರಾಟ ಮಾಡಿದೆ’ ಎಂದು ಆರೋಪಿಸಿದೆ.

ಕರ್ನಾಟಕದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಟ್ವೀಟ್ ಮಾಡಿ, ಬಿಜೆಪಿಯಲ್ಲಿ ’40’ ಅಂಕೆ ಬೇರೂರಿದೆ! ಇಂದು ಬೆಂಗಳೂರಿನಲ್ಲಿ ಪ್ರಧಾನಿ ನಡೆಸಿದ 40 ಕಿಮೀ ರೋಡ್‌ಶೋ, ಶೇಕಡಾ 40 ಕಮಿಷನ್ ಬೇಡಿಕೆ ಬಿಜೆಪಿ ಸರ್ಕಾರದ ಮನಸ್ಥಿತಿಯನ್ನು ತೋರಿಸುತ್ತಿದೆ. ಮಣಿಪುರ ರಾಜ್ಯ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದು ಪ್ರಧಾನಿ ರಾಜಧರ್ಮವನ್ನು ಅನುಸರಿಸುವ ಮಾರ್ಗವೇ ಎಂದು ಪ್ರಶ್ನಿಸಿದ್ದಾರೆ.

No Comments

Leave A Comment