‘ನನ್ನ ತಾಯಿ ಅಂದು ಸಾಯಲು ನಿರ್ಧರಿಸಿದ್ದಾಗ ಹೆಗ್ಗಡೆಯವರು ಬುದ್ದಿಮಾತು ಹೇಳಿ ಕಳುಹಿಸಿದ್ದರು’- ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ನಟ ದರ್ಶನ್
ಧರ್ಮಸ್ಥಳ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಿನ್ನೆ ಮೇ 3ರಂದು ಬುಧವಾರ ಸಂಜೆ ಧರ್ಮಸ್ಥಳದಲ್ಲಿ 51ನೇ ವರ್ಷದ ಸಾಮೂಹಿಕ ವಿವಾಹ ನಡೆಯಿತು.
ಪ್ರೀತಿ, ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ, ಯಾವುದೇ ದುರಾಭ್ಯಾಸಕ್ಕೂ ತುತ್ತಾಗದೆ, ಬದುಕುತ್ತೇವೆ ಹೀಗೆಂದು ತುಳು ಮತ್ತು ಕನ್ನಡ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಹಾಗೂ ಆಯಾ ಜಾತಿಯ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನ ನೆರವೇರಿಸುವ ಮೂಲಕ ಧರ್ಮಸ್ಥಳದಲ್ಲಿ 201 ಜೋಡಿ ಸಪ್ತಪದಿ ತುಳಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಮೂಹಿಕ ವಿವಾಹ ನಡೆಯಿತು.
ಒಟ್ಟು 52 ಅಂತರ್ಜಾತಿ ಜೋಡಿಗಳು, ಪರಿಶಿಷ್ಟ ಜಾತಿಗೆ ಸೇರಿದ 52 ಜೋಡಿಗಳು, ಕುರುಬ ಸಮುದಾಯಕ್ಕೆ ಸೇರಿದ ತಲಾ ಒಂಬತ್ತು ಜೋಡಿಗಳು ಮತ್ತು ವೀರಶೈವರು, ಪರಿಶಿಷ್ಟ ಪಂಗಡಕ್ಕೆ ಸೇರಿದ 11 ಜೋಡಿಗಳು ವಿವಾಹವಾದರು. ಚಿತ್ರನಟ ದರ್ಶನ್ ಮುಖ್ಯ ಅತಿಥಿ: ಚಿತ್ರನಟ ದರ್ಶನ್ ತೂಗುದೀಪ ಆಗಮಿಸಿ ನವಜೋಡಿಗಳಿಗೆ ಶುಭ ಹಾರೈಸಿ ಹಿತವಚನ ನುಡಿದರು. ಈ ವೇಳೆ ತಮ್ಮ ವಿವಾಹ ಕೂಡ ಧರ್ಮಸ್ಥಳದಲ್ಲಿ ನೆರವೇರಿತು ಎಂದು ದರ್ಶನ್ ನೆನಪು ಮಾಡಿಕೊಂಡರು. ದುಂದುವೆಚ್ಚಗಳನ್ನು ಮಾಡದೆ ಸರಳ ವಿವಾಹವಾಗುವುದು ಉತ್ತಮ ಎಂದರು.