
ಪೊಲೀಸರ ದೌರ್ಜನ್ಯದಿಂದ ಬೇಸರ: ಕುಸ್ತಿಪಟುಗಳಿಂದ ಪದಕ ಮತ್ತು ಪ್ರಶಸ್ತಿಗಳನ್ನು ಹಿಂದಿರುಗಿಸುವ ಬೆದರಿಕೆ!
ನವದೆಹಲಿ: ದೆಹಲಿ ಪೊಲೀಸರ ದೌರ್ಜನ್ಯದಿಂದ ಮನನೊಂದ ಪ್ರತಿಭಟನಾ ನಿರತ ಕುಸ್ತಿಪಟುಗಳು ಇಂದು ತಮ್ಮ ಪದಕ ಮತ್ತು ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಬೆದರಿಕೆ ಹಾಕಿದ್ದು, ಈ ರೀತಿ ಅಗೌರವ ತೋರಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಕುಸ್ತಿಪಟುಗಳು ಮಲಗಲು ಮಂಚಗಳನ್ನು ತಂದಾಗ ಗಲಾಟೆ ಪ್ರಾರಂಭವಾಯಿತು. ನಿಯಮಾನುಸಾರ ಪ್ರದರ್ಶನ ನಡೆಯುವ ಸ್ಥಳದಲ್ಲಿ ಅಂತಹ ವಸ್ತುಗಳನ್ನು ಅನುಮತಿಸಲಾಗುವುದಿಲ್ಲ ಎಂದು ಕರ್ತವ್ಯದಲ್ಲಿದ್ದ ಪೊಲೀಸರು ಅದರ ಬಗ್ಗೆ ವಿಚಾರಿಸಲು ಪ್ರಾರಂಭಿಸಿದರು. ಈ ವೇಳೆ ಪುರುಷ ಪೊಲೀಸ್ ಅಧಿಕಾರಿಗಳು ತಮ್ಮನ್ನು ತಳ್ಳಾಡಿದರು, ನಿಂದಿಸಿದರು ಎಂದು ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಈ ಗಲಾಟೆಯಲ್ಲಿ ಸಂಗೀತಾ ಫೋಗಟ್ ಸಹೋದರ ದುಶ್ಯಂತ್ ಸೇರಿದಂತೆ ಇಬ್ಬರು ಕುಸ್ತಿಪಟುಗಳಿಗೆ ಗಾಯಗಳಾಗಿವೆ. ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಸ್ತಿಪಟುಗಳನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ. ಇದು ಹೀಗೆ ಮುಂದುವರೆದರೆ ನಾವು ನಮ್ಮ ಎಲ್ಲಾ ಪದಕಗಳು ಮತ್ತು ಪ್ರಶಸ್ತಿಗಳನ್ನು ಭಾರತ ಸರ್ಕಾರಕ್ಕೆ ಹಿಂದಿರುಗಿಸುತ್ತೇವೆ. ಬಳಿಕ ಸಾಮಾನ್ಯ ಜೀವನವನ್ನು ನಡೆಸುತ್ತೇವೆ ಎಂದರು.
ವಿನೇಶ್, ಸಾಕ್ಷಿ ಮತ್ತು ಬಜರಂಗ್ ಮೂವರೂ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯ ಖೇಲ್ ರತ್ನ ಸ್ವೀಕರಿಸಿದ್ದಾರೆ. ಸಾಕ್ಷಿ(2017) ಮತ್ತು ಬಜರಂಗ್(2019) ಅವರು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.