Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ತಪ್ಪು ಮಾಡಿಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; ಎಫ್ಐಆರ್ ಬೆನ್ನಲ್ಲೇ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಹೇಳಿಕೆ

ನವದೆಹಲಿ: ನಾನು ಮುಗ್ಧ, ಯಾವುದೇ ತಪ್ಪೂ ಮಾಡಿಲ್ಲ. ಮಾಡದ ತಪ್ಪಿಗೆ ರಾಜೀನಾಮೆ ನೀಡುವುದಿಲ್ಲ ಎಂದು ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಶನಿವಾರ ಹೇಳಿದ್ದಾರೆ.

ಮಹಿಳಾ ಅಥ್ಲೀಟ್‌ಗಳಿಂದ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕೇಳಿ ಬಂದಿದ್ದು, ಈ ಕುರಿತು ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸದ ಹಾಗೂ ಡಬ್ಲ್ಯುಎಫ್‌ಐ ಅಧ್ಯಕ್ಷನ ವಿರುದ್ಧ ಕ್ರಮ ಕೈಗೊಳ್ಳದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ದೆಹಲಿ ಪೊಲೀಸರು ಇದೀಗ ಬ್ರಿಜ್ ಭೂಷಣ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಎಫ್ಐಆರ್ ದಾಖಲಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್, ಅವರು, ಸ್ಥಾನಕ್ಕೆ ರಾಜೀನಾಮೆ ನೀಡುವುದು ನನಗೆ ದೊಡ್ಡ ವಿಷಯವಲ್ಲ. ಆದರೆ, ನಾನು ಮಾಡದ ತಪ್ಪಿಗೆ ರಾಜೀನಾಮೆ ನೀಡುವುದಿಲ್ಲ. ನಾನು ಮುಗ್ಧ, ಯಾವುದೇ ತಪ್ಪನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.

ಕುಸ್ತಿಪಟುಗಳ ಬೇಡಿಕೆಗಳು ಬದಲಾಗುತ್ತಲೇ ಇವೆ. ಮೊದಲಿಗೆ ಫೆಡರೇಶನ್ ಮುಖ್ಯಸ್ಥ ಸ್ಥಾನಕ್ಕೆ ನನ್ನ ರಾಜೀನಾಮೆಗೆ ಆಗ್ರಹಿಸಿದ್ದರು. ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದರೆ ಅದರ ಅರ್ಥ ಆರೋಪಗಳನ್ನು ಒಪ್ಪಿಕೊಂಡಾಗುತ್ತದೆ. ರಾಜೀನಾಮೆ ನೀಡುವುದು ದೊಡ್ಡ ವಿಶಯವಲ್ಲ. ಆದರೆ, ನಾನು ಮುಗ್ಧ, ಯಾವ ತಪ್ಪನ್ನೂ ಮಾಡಿಲ್ಲ. ನಾನು ಕ್ರಿಮಿನಲ್ ಅಲ್ಲ. ಎಫ್ಐಆರ್ ಪ್ರತಿ ಇನ್ನೂ ನನ್ನ ಕೈ ಸೇರಿಲ್ಲ. ಎಫ್ಐಆರ್ ಬಗ್ಗೆ ಪ್ರತಿ ಸಿಕ್ಕ ಬಳಿಕ ಮಾತನಾಡುತ್ತೇನೆಂದು ತಿಳಿಸಿದ್ದಾರೆ.

ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಕ್ಕೂ ಮೊದಲು ಆರೋಪ ಪರಿಶೀಲಿಸಲು ನಿಯೋಜಿಸಲಾಗಿರುವ ಸಮಿತಿಯ ವರದಿಗಾಗಿ ಕಾಯಬೇಕಿತ್ತು. ನ್ಯಾಯಾಂಗದ ನಿರ್ಧಾರ ಸಂತಸ ತಂದಿದೆ. ಎಫ್ಐಆರ್ ದಾಖಲಿಸಿರುವ ದೆಹಲಿ ಪೊಲೀಸರು, ಆರೋಪಗಳ ಬಗ್ಗೆ ತನಿಖೆ ನಡೆಸುತ್ತಾರೆ, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ಈ ದೇಶದಲ್ಲಿ ನ್ಯಾಯಾಂಗಕ್ಕಿಂತ ಯಾರೂ ದೊಡ್ಡವರು ಯಾರೂ ಇಲ್ಲ. ನಾನು ಸುಪ್ರೀಂ ಕೋರ್ಟ್‌ಗಿಂತ ದೊಡ್ಡವನಲ್ಲ. ಆದೇಶವನ್ನು ಸ್ವಾಗತಿಸುತ್ತೇನೆಂದು ಹೇಳಿದ್ದಾರೆ.

ಈ ನಡುವೆ ಗೊಂಡಾದ ಕರ್ನಲ್ ಗಂಜ್ ಕ್ಷೇತ್ರದ ಶಾಸಕ ಅಜಯ್ ಪ್ರತಾಪ್ ಸಿಂಗ್ ಅವರು ಮಾತನಾಡಿ, ಇದು ಆಡಳಿತ ಪಕ್ಷದ ವಿರುದ್ಧ ಕಾಂಗ್ರೆಸ್ ಮತ್ತು “ಕೆಲವು ಕೈಗಾರಿಕೋದ್ಯಮಿಗಳು ನಡೆಸುತ್ತಿರುವ ಪಿತೂರಿಯಾಗಿದೆ. ಇದು ಕುಸ್ತಿಪಟುಗಳ ಪ್ರತಿಭಟನೆಯಲ್ಲ. ಇದು ಪೂರ್ವ ಯೋಜಿತ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಬ್ರಿಜ್ ಭೂಷಣ್ ಸಿಂಗ್ ಅವರ ರಾಜಕೀಯ ಬೆಳವಣಿಗೆಯನ್ನು ನಾಶಪಡಿಸಲು ಕಾಂಗ್ರೆಸ್ ಪಿತೂರಿ ನಡೆಸುತ್ತಿದೆ. ಇದು ಕಾಂಗ್ರೆಸ್‌ನ ರಾಜಕೀಯ ಷಡ್ಯಂತ್ರ, ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ, ಸಾಮಾನ್ಯ ಜನರು ಬ್ರಿಜ್ ಭೂಷಣ್ ಸಿಂಗ್, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಇದ್ದಾರೆಂದು ಹೇಳಿದ್ದಾರೆ.

No Comments

Leave A Comment