ಸಿಡಿ ಭಯದಿಂದ ಸ್ಟೇ ತಂದೋರಿಗೆ, 80 ಪ್ರಕರಣದಲ್ಲಿ ಭಾಗಿಯಾದವರಿಗೆ ಟಿಕೆಟ್ ಕೊಟ್ರು; ನನಗೆ ‘ಕೈ’ ಕೊಟ್ರು: ಶೆಟ್ಟರ್ ವಾಗ್ದಾಳಿ
ಹುಬ್ಬಳ್ಳಿ: ನಿನ್ನೆ ಮೊನ್ನೆ ಪಕ್ಷಕ್ಕೆ ಬಂದೋರಿಗೆ, ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಟ್ಟಿದ್ದೀರಿ. ನನಗೆ ಮಾತ್ರ ಟಿಕೆಟ್ ಸಿಗಲಿಲ್ಲ. ನನಗೆ ಟಿಕೆಟ್ ಕೈ ತಪ್ಪಿದಾಗ ಯಾರೊಬ್ಬರೂ ನನ್ನನ್ನು ಮಾತನಾಡಿಸಲಿಲ್ಲ. ಗೌರವದಿಂದ ನಡೆಸಿಕೊಳ್ಳಲಿಲ್ಲ ಎಂದಷ್ಟೇ ನಾನು ಬಿಜೆಪಿ ಬಿಟ್ಟು ಹೊರಬಂದೆ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅಳಲು ತೋಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟಿಕೆಟ್ ದೊರಕದ ಕಾರಣಕ್ಕಾಗಿ ನಾನು ರೆಬಲ್ ಆದಮೇಲೆ ರಾಜ್ಯಸಭಾ ಸದಸ್ಯನನ್ನಾಗಿ ಮಾಡುತ್ತೇವೆ, ಕೇಂದ್ರದಲ್ಲಿ ದೊಡ್ಡ ಹುದ್ದೆ ಕೊಡುತ್ತೇವೆ ಎಂದು ಆಮಿಷವೊಡ್ಡಿದರು. ಆದರೆ, ತತ್ವ ಮತ್ತು ಸಿದ್ಧಾಂತದ ಬಗ್ಗೆ ಮಾತನಾಡುವವರು, ಸಿಡಿ ಭಯದಿಂದ ಕೋರ್ಟ್‌ನಲ್ಲಿ ಸ್ಟೇ ತಂದವರಿಗೆ, 80 ಪ್ರಕರಣಗಳಲ್ಲಿ ಭಾಗಿಯಾದವರಿಗೆ ಟಿಕೆಟ್ ನೀಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದರು. ಆರೋಪಿಸಿದರು.
ಮುಂದುವರಿದು, ಪಕ್ಷ ಬಿಟ್ಟಿದ್ದು ನಾನೊಬ್ಬನೇ ಅಲ್ಲ, ಹಲವು ಮುಖಂಡರು ಪಕ್ಷ ಬಿಟ್ಟಿದ್ದಾರೆ. ಹೀಗಿದ್ದರೂ, ನನ್ನನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರಿಂದ ನನ್ನ ಬೈಯಿಸಲಾಗುತ್ತಿದೆ. ಅವರು ಮಾಡಿರುವ ಟೀಕೆಗಳನ್ನು ಆಶೀರ್ವಾದ ಎಂದು ಭಾವಿಸುತ್ತೇನೆ’ ಎಂದು ಹೇಳಿದರು.
ಯಡಿಯೂರಪ್ಪ ಅವರು ನನಗೆ ಟಿಕೆಟ್ ಕೊಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ, ಅವರು ಅಸಹಾಯಕರಾದರು. ಯಡಿಯೂರಪ್ಪ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಲಾಗುತ್ತಿದೆ. ಇದೇ ಯಡಿಯೂರಪ್ಪನವರು ಕೆಜೆಪಿ ಕಟ್ಟಿದಾಗ ಬಸವರಾಜ ಬೊಮ್ಮಾಯಿ ಪಕ್ಷಕ್ಕೆ ಬರಲಿಲ್ಲವೆಂದು ಬೈದಿದ್ದರು. ಆದರೆ, ಬೊಮ್ಮಾಯಿಯವರು ಬಿಜೆಪಿಯಲ್ಲಿ ಗೆಲುವು ಸಾಧಿಸಿದ್ದರು. ನಾನು ಕೂಡಾ ಅತಿ ಹೆಚ್ಚು ಲೀಡ್ನಿಂದ ಗೆಲುವು ಸಾಧಿಸುತ್ತೇನೆ ಎಂದು ಹೇಳಿದರು.
ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರ ಸಣ್ಣ ಕ್ಷೇತ್ರ. ಈ ಕ್ಷೇತ್ರದಲ್ಲಿ ಬಿಜೆಪಿಯ ರಾಷ್ಟ್ರ ನಾಯಕರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಚಿವೆ ಸ್ಮೃತಿ ಇರಾನಿ ಅವರನ್ನು ನನ್ನ ವಿರುದ್ಧ ಕರೆತಂದಿದ್ದಾರೆ. ಈ ಬಡಪಾಯಿ ಮೇಲೇಕೆ ಇಷ್ಟೊಂದು ಪ್ರಹಾರ. ನನ್ನ ಮೇಲೆ ಎಲ್ಲರೂ ಮುಗಿಬಿದ್ದಿದ್ದಾರೆ. ಇವರೆಲ್ಲರೂ ಸೇರಿ ಸಣ್ಣ ಸೆಂಟ್ರಲ್ ಕ್ಷೇತ್ರವನ್ನು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದು ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.