ಲಿಂಗಾಯತ ಸಿಎಂ ಹೇಳಿಕೆ: ಸಿದ್ದರಾಮಯ್ಯಗೆ ಜನ ಪಾಠ ಕಲಿಸುತ್ತಾರೆ-ಬೊಮ್ಮಾಯಿ
ಬೆಂಗಳೂರು: ಲಿಂಗಾಯತ ಸಿಎಂಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಜಗಜ್ಯೋತಿ ಬಸವೇಶ್ವರ ಅವರ 890ನೇ ಜನ್ಮದಿನ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ವಿಧಾನಸೌಧದ ಮುಂಭಾಗದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂದು ಬಸವ ಜಯಂತಿ. ಇಂದಿನಿಂದ ನಮ್ಮ ಪ್ರಚಾರ ಆರಂಭಿಸುತ್ತಿದ್ದೇವೆ. ನಾವು ಬಸವ ತತ್ವದಡಿ ಆಡಳಿತ ನಡೆಸಿದ್ದೇವೆ. ಅದರ ಮೂಲಕವೇ ಪ್ರಚಾರ ಆರಂಭಿಸುತ್ತೇವೆ. ಸಿದ್ದರಾಮಯ್ಯ ಹಿರಿಯ ನಾಯಕರಾಗಿ ಈ ರೀತಿಯ ಹೇಳಿಕೆ ನೀಡಬಾರದಿತ್ತು. ಅವರವರ ಸಮಾಜದ ನಾಯಕರು ಅವರ ಯೋಗ್ಯತೆ, ಕ್ಷಮತೆಯಲ್ಲಿ ಕೆಲಸ ಮಾಡುತ್ತಾರೆ. ಅವರ ಘನತೆಗೆ ಇದು ತಕ್ಕ ಹೇಳಿಕೆ ಅಲ್ಲ ಎಂದರು.
ರಾಹುಲ್ ಗಾಂಧಿ ಈ ಹಿಂದೆ ಮೋದಿ ಹೆಸರಿಗೆ ಕೊಟ್ಟ ಹೇಳಿಕೆಯ ರೀತಿಯಲ್ಲಿ ಸಿದ್ದರಾಮಯ್ಯ ಈಗ ಮಾತನಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್ ಮತ್ತು ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಇದ್ದರು.