Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಸುಡಾನ್ ಸೇನಾ ಸಂಘರ್ಷ: ಭಾರತದ ಪ್ರಜೆ ಸೇರಿ ಕನಿಷ್ಠ 65 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

ಖಾರ್ಟೂಮ್: ಸುಡಾನ್ ನಡೆಯುತ್ತಿರುವ ಸೇನಾ ಸಂಘರ್ಷದಲ್ಲಿ ಓರ್ವ ಭಾರತೀಯ ಸೇರಿದಂತೆ ಕನಿಷ್ಠ 65 ಮಂದಿ ಸಾವಿಗೀಡಾಗಿದ್ದು, 500 ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇಲ್ಲಿನ ಮಿಲಿಟರಿ ಹಾಗೂ ಪ್ಯಾರಾಮಿಲಿಟರಿ ನಡುವೆ ಸಂಘರ್ಷ ಸಂಭವಿಸಿದ ಪರಿಣಾಮ ಕನಿಷ್ಠ 65 ಮಂದಿ ಸಾವಿಗೀಡಾಗಿದ್ದು, ಈ ಪೈಕಿ ಸುಡಾನ್ ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಭಾರತ ಮೂಲದ ವ್ಯಕ್ತಿ ಕೂಡ ಸೇರಿದ್ದಾರೆ ಎನ್ನಲಾಗಿದೆ. ಮೃತ ವ್ಯಕ್ತಿಯ ದೇಹದ ಮೇಲೆ ಗುಂಡಿನ ಗಾಯಗಳಾಗಿದ್ದು, ಆತ ಸೇನಾ ಗುಂಡಿಗೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ.

“ಸೂಡಾನ್‌ನ ದಾಲ್ ಗ್ರೂಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆ ಆಲ್ಬರ್ಟ್ ಆಗಸ್ಟಿನ್ ನಿನ್ನೆ ದಾರಿತಪ್ಪಿ ಸಂಘರ್ಷ ಪೀಡಿತ ಪ್ರದೇಶಕ್ಕೆ ತೆರಳಿದ್ದಾಗ ಗುಂಡು ತಗುಲಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ” ಎಂದು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಟ್ವೀಟ್ ಮಾಡಿದೆ.

ಅಂತೆಯೇ ರಾಯಭಾರ ಕಚೇರಿ ಆಗಸ್ಟೀನ್ ಅವರ ಕುಟುಂಬ ಮತ್ತು ವೈದ್ಯಕೀಯ ಪ್ರಾಧಿಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಮಾಹಿತಿ ನೀಡಿದೆ. ಇನ್ನು ಸೇನಾ ಸಂಘರ್ಷ ಘಟನೆಯಲ್ಲಿ 500ಕ್ಕೂ ಹೆಚ್ಚಿನವರಿಗೆ ಗಂಭೀರ ಗಾಯಗಳಾಗಿವೆ ಎಂದು ಸುಡಾನ್ ಕೇಂದ್ರ ವೈದ್ಯಕೀಯ ಮಂಡಳಿಯು ತಿಳಿಸಿದೆ.

ಈ ಘರ್ಷಣೆಯು ಇನ್ನೂ ಮುಂದುವರಿದಿದ್ದು ಗಾಯಾಳುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ತಿಳಿಸಿವೆ. ಸುಡಾನ್‌ನ ರಾಜಧಾನಿಯಾದ ಖಾರ್ಟೂಮ್‌ ಪ್ರದೇಶದ ವಿವಿಧೆಡೆ ಶಸಸ್ತ್ರ ಸೇನೆ ಮತ್ತು ಅರೆಸೈನಿಕ ಪಡೆ ನಡುವೆ ನಡೆಯುತ್ತಿರುವ ಸಮರ ರಾಜಕೀಯ ಸಂಘರ್ಷವಾಗಿದೆ.

ಶನಿವಾರ ಬೆಳಗ್ಗಿನಿಂದ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ನಡೆಯುತ್ತಿದ್ದ ಸೈನಿಕರ ಸಂಘರ್ಷ ಬರಬರುತ್ತ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ಗುಂಡಿನ ಚಕಮಕಿಯಿಂದಾಗಿ ಸಾವುನೋವಿಗೆ ತುತ್ತಾದವರಲ್ಲಿ ಅಮಾಯಕ ನಾಗರಿಕರ ಸಂಖ್ಯೆಗಳನ್ನು ಮಾತ್ರ ಪ್ರಕಟಿಸಲಾಗಿದೆ.

ಸುಡಾನ್‌ನಲ್ಲಿರುವ ಮಿಲಿಟರಿ ಆಡಳಿತದ ವಿರುದ್ಧ ಅರೆಸೇನಾಪಡೆ ದಂಗೆ ಎದ್ದಿದ್ದು, ಖಾರ್ಟೂಮ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಧ್ಯಕ್ಷರ ನಿವಾಸವನ್ನು ವಶಕ್ಕೆ ಪಡೆಯಲು ಯತ್ನಿಸಿತ್ತು. ಈ ಸಂದರ್ಭ ಮಿಲಿಟರಿ ಪ್ರತಿರೋಧ ಒಡ್ಡಿದೆ. ಆಗ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ.

No Comments

Leave A Comment