ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬಿಜೆಪಿ ಬುಡಕ್ಕೆ ಬಂಡಾಯದ ಬೆಂಕಿ… ಜೆಡಿಎಸ್ ಗೆ ಕುಟುಂಬ ಕಲಹದ ಉರಿ
ಚುನಾವಣೆಗೆ ಅಧಿಸೂಚನೆ ಹೊರ ಬಿದ್ದು ನಾಮ ಪತ್ರ ಸಲ್ಲಿಕೆ ಆರಂಭವಾಗಿರುವ ಈ ಹೊತ್ತಿನಲ್ಲಿ ಆಡಳಿತ ಪಕ್ಷ ಬಿಜೆಪಿಯಲ್ಲಿ ಬಂಡಾಯದ ಬೆಂಕಿ ಭುಗಿಲೆದ್ದಿದೆ. ಇದು ಸದ್ಯಕ್ಕೆ ತಣ್ಣಗಾಗುವ ಸಾಧ್ಯತೆಗಳಿಲ್ಲ. ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ನಂತರವೂ ಹೆಚ್ಚುತ್ತಲೇ ಇದೆ. ಇಷ್ಟೆಲ್ಲ ಆದ ನಂತರವೂ ಇನ್ನೂ ಕೆಲವು ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಆಗಿಲ್ಲ. ಅಥವಾ ಆ ಪಟ್ಟಿಯನ್ನು ಅಂತಿಮಗೊಳಿಸಲು ಬಿಜೆಪಿ ನಾಯಕತ್ವಕ್ಕೆ ಇನ್ನೂ ಸಾಧ್ಯವಾಗಿಲ್ಲ.
ಈ ಲೇಖನ ಅಂತಿಮಗೊಳ್ಳುತ್ತಿರುವ ಹೊತ್ತಿನಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಬಂಡಾಯ ಎದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಬೆಳಗಾವಿ ಜಿಲ್ಲೆಯ ಪ್ರಬಲ ಮುಖಂಡ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಆ ಪಕ್ಷ ತಯಾರಿ ನಡೆಸಿದೆ. ಬಹು ಮುಖ್ಯವಾಗಿ ಬಿಜೆಪಿ ನಾಯಕತ್ವದ ವಿರುದ್ಧ ಸಿಡಿದೆದ್ದಿರುವ ಅವರನ್ನು ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಆಸ್ಥೆ ವಹಿಸಿ ಕಾಂಗ್ರೆಸ್ ಗೆ ಕರೆ ತಂದಿದ್ದು ಅವರ ಷರತ್ತುಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಇನ್ನೊಬ್ಬ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೂ ನಾಯಕತ್ವದ ವಿರುದ್ಧ ಮುನಿಸಿಕೊಂಡಿದ್ದಾರಾದರೂ ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರಷ್ಟೇ ಅಲ್ಲ ವರಿಷ್ಠರು ಹಾಗೂ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನವರ ಜತೆಗಿನ ಮಾತುಕತೆ ನಂತರ ಚುನಾವಣೆಯಲ್ಲಿ ಸ್ಪರ್ಧೆಗೆ ಪಕ್ಷದ ಟಿಕೆಟ್ ಸಿಗುವ ಭರವಸೆಯಲ್ಲಿದ್ದಾರೆ.
ಪ್ರಮುಖವಾಗಿ ಅಭ್ಯರ್ಥಿಗಳ ಪಟ್ಟಿ ಹೊರ ಬೀಳುತ್ತಿದ್ದಂತೆ ಉಳಿದ ಪಕ್ಷಗಳಿಗಿಂತ ಬಿಜೆಪಿಯಲ್ಲೇ ಬಂಡಾಯದ ಬೆಂಕಿ ಹೊತ್ತಿ ಉರಿಯಲು ಆರಂಭಿಸಿದೆ. ಈ ಬಾರಿಯ ಚುನಾವಣೆಗೆ ಪಕ್ಷ ಒಂದಷ್ಟು ಹೊಸ ಮುಖಗಳನ್ನು ಆಯ್ಕೆ ಮಾಡಿದೆಯಾದರೂ ಯಾವುದೇ ವಿವಾದಗಳಿಲ್ಲದೇ ಪಕ್ಷ ನಿಷ್ಠರಾಗಿದ್ದ ಸಚಿವ ಅಂಗಾರ ಸೇರಿದಂತೆ ಕೆಲವರನ್ನು ಕೈಬಿಟ್ಟಿರುವುದು ಹಾಗೆಯೇ ಮೈಸೂರಿನ ವರುಣಾ ಹಾಗೂ ಬೆಂಗಳೂರಿಗೆ ಅಂಟಿಕೊಂಡೇ ಇರುವ ಕನಕಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಇಬ್ಬರು ಸಚಿವರನ್ನು ಅವರ ಇಷ್ಟಕ್ಕೆ ವಿರುದ್ಧವಾಗಿ ಕಣಕ್ಕಿಳಿಸಿದೆ. ಇದು ಒಂದು ರೀತಿಯಲ್ಲಿ ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿಗಳ ವಿರುದ್ಧ ಸೆಣಸಲು ಸಮರ್ಥ ಅಭ್ಯರ್ಥಿಗಳು ಸಿಗದೇ ಪರದಾಟ ನಡೆಸಿರುವುದು ಮೇಲ್ನೋಟಕ್ಕೇ ಗೊತ್ತಾಗುವ ಅಂಶ. ದಶಕಗಳ ಇತಿಹಾಸ ಹೊಂದಿರುವ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಚುನಾವಣೆಯಲ್ಲಿ ಸೆಣಸಲು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂಬುದು ಒಂದು ರೀತಿಯ ರಾಜಕೀಯ ದುರಂತ ಎನ್ನಬಹುದು.
ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಶಾಸಕರಾಗಿ, ಸಚಿವರಾಗಿ ಜನಪ್ರಿಯರಾಗಿದ್ದ ವಿ. ಸೋಮಣ್ಣ ಅವರನ್ನು ಅವರ ಇಷ್ಟಕ್ಕೆ ವಿರುದ್ಧವಾಗಿ ವರುಣಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಸೋಮಣ್ಣ ಚಾಮರಾಜನಗದ ಕ್ಷೇತ್ರದಿಂದಲೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಆದರೆ ಅಲ್ಲಿ ಅವರಿಗೆ ಪಕ್ಷದ ಕಾರ್ಯಕರ್ತರಿಂದಲೇ ಪ್ರಬಲ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಅಲ್ಲಿನ ಬಿಜೆಪಿ ಮುಖಂಡ ರುದ್ರೇಶ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಈ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಈ ಮೊದಲು ಅಭ್ಯರ್ಥಿಯಾಗಿಸಲು ನಿರ್ಧರಿಸಿತ್ತಾದರೂ ಇದಕ್ಕೆ ಯಡಿಯೂರಪ್ಪ ಒಪ್ಪದ ಕಾರಣ ಕಡೇ ಗಳಿಗೆಯಲ್ಲಿ ಸೋಮಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಈಗಲೂ ಸೋಮಣ್ಣ ಅವರಿಗೆ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಯುವ ಮನಸ್ಸಿಲ್ಲ. ಮತ್ತೆ ಗೋವಿಂದರಾಜನಗರ ಕ್ಷೇತ್ರದಿಂದಲೇ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ.
ಇನ್ನು ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದ ಕಂದಾಯ ಸಚಿವ ಆರ್. ಅಶೋಕ್ ಆಯ್ಕೆ ವಿಚಾರದಲ್ಲೂ ಬಿಜೆಪಿ ಎಡವಿದೆ. ಈ ಕ್ಷೇತ್ರದಿಂದ ನಿರಂತರವಾಗಿ ಗೆಲ್ಲುತ್ತಿರುವ ಮತ್ತು ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ಶಿವಕುಮಾರ್ ಎದುರು ಅಶೋಕ್ ಅತ್ಯಂತ ಪೇಲವ ಅಭ್ಯರ್ಥಿಯಾಗಿ ಕಾಣಿಸುತ್ತಿದ್ದಾರೆ. ಕನಕಪುರ ಜತೆಗೇ ಬೆಂಗಳೂರಿನ ಪದ್ಮನಾಭನಗರದಿಂದಲೂ ಅಶೋಕ್ ಸ್ಪರ್ಧಿಸಲಿದ್ದಾರೆ. ಶಿವಕುಮಾರ್ ಎದುರು ಸೆಣಸಲು ಅವರಿಗೆ ಆಸಕ್ತಿ ಇಲ್ಲ, ಕನಕಪುರಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮುನ್ನ ತನ್ನ ಜತೆ ಪಕ್ಷದ ನಾಯಕರು ಸಮಾಲೋಚಿಸಲಿಲ್ಲ ಎಂದು ಬಹಿರಂಗವಾಗೇ ಹೇಳಿದ್ದಾರೆ.
ಇವು ಮೂರು ಕೇವಲ ನಿದರ್ಶನಗಳು ಮಾತ್ರ. ಮತ್ತೆ ಅಧಿಕಾರಕ್ಕೆ ಬರುವ ಅವಸರದಲ್ಲಿರುವ ಬಿಜೆಪಿ ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಿದೆ. ಅದರ ಪ್ರತಿಫಲ ಎಂಬಂತೆ ಬಂಡಾಯದ ಬೆಂಕಿ ಬುಡಕ್ಕೇ ಹೊತ್ತಿಕೊಂಡಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪ್ರಮುಖ ಪಾತ್ರ ವಹಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಮುಂದಿನ ಮುಖ್ಯಮಂತ್ರಿ ರೇಸ್ ನಲ್ಲಿರುವ ಪ್ರಲ್ಹಾದ ಜೋಶಿ ತಮ್ಮ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಿರುವ ಆಯ್ದ ಬಿಜೆಪಿ ಸಚಿವರನ್ನು ತಮ್ಮ ದಾರಿಯಿಂದ ದೂರ ಸರಿಸಲು ಹುನ್ನಾರ ನಡೆಸಿದ್ದಾರೆ ಆ ಕಾರಣಕ್ಕೆ ಇಬ್ಬರು ಹಿರಿಯ ಸಚಿವರನ್ನು ಎರಡೆರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸುವ ಮೂಲಕ ಗೊಂದಲ ಉಂಟಾಗಲು ಕಾರಣರಾಗಿದ್ದಾರೆ ಎಂಬ ಆರೋಪಗಳು ಬಿಜೆಪಿ ಶಿಬಿರದಿಂದಲೇ ಕೇಳಿ ಬರುತ್ತಿದೆ. ಒಟ್ಟಾರೆ ಅಂತಿಮ ಪಟ್ಟಿ ಹೊರ ಬೀಳುವ ಮುನ್ನವೇ ಎದ್ದಿರುವ ಬಂಡಾಯದ ಜ್ವಾಲೆ ತಣ್ಣಗಾಗುವುದಿಲ್ಲ. ಆದರೆ ಈ ಎಲ್ಲ ಬೆಳವಣಿಗೆಗಳ ಮಧ್ಯೆಯೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಣ್ಣಗಿದ್ದಾರೆ. ಯಾವುದೇ ವಿವಾದಗಳ ತಂಟೆಗೆ ಅವರು ಹೋಗುತ್ತಿಲ್ಲ. ಅವರು ಹೇಳಿದ 30 ಮಂದಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ.
ಜೆಡಿಎಸ್ ನಲ್ಲಿ ನಿಲ್ಲದ ಕಚ್ಚಾಟ:
ಜೆಡಿಎಸ್ ಕುಟುಂಬದ ಜಗಳಕ್ಕೆ ಸಿಕ್ಕಿ ಹೈರಾಣಾಗಿದೆ. ಚುನಾವಣೆ ಪ್ರಕ್ರಿಯೆಗಳು ಆರಂಭವಾಗಿದ್ದರೂ ಹಾಸನ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸೋದರ ರೇವಣ್ಣ ನಡುವಿನ ಕಿತ್ತಾಟ ಬೀದಿ ರಂಪವಾಗಿದೆ. ಐದು ದಶಕಗಳ ರಾಜಕೀಯದಲ್ಲಿ ಇಂತಹ ಎಷ್ಟೋ ಸಮಸ್ಯೆಗಳನ್ನು ಲೀಲಾಜಾಲವಾಗಿ ಎದುರಿಸಿ ಬಗೆಹರಿಸಿರುವ ಹಿರಿಯ ನಾಯಕ ಮಾಜಿ ಪ್ರಧಾನಿ ದೇವೇಗೌಡರಿಗೆ ಕುಟುಂಬದಲ್ಲಿನ ಜಗಳ ವಿಕೋಪಕ್ಕೆ ಹೋಗಿದ್ದರೂ ಅದಕ್ಕೊಂದು ಪರಿಹಾರ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಹಾಸನದಿಂದ ಸ್ಪರ್ಧೆಗೆ ರೇವಣ್ಣ ಪತ್ನಿ ಶ್ರೀಮತಿ ಭವಾನಿ ಪಟ್ಟು ಹಿಡಿದಿದ್ದಾರೆ. ಅವರ ಸ್ಪರ್ಧೆಗೆ ಕುಮಾರಸ್ವಾಮಿ ಒಪ್ಪುತ್ತಿಲ್ಲ. ಮನೆಯೊಳಗಣ ಜಗಳ ಬೀದಿಗೆ ಬಂದಿದ್ದು ಉಳಿದವರ ಪಾಲಿಗೆ ಮನರಂಜನೆಯಾಗಿ ಪರಿಣಮಿಸಿರುವುದು ದುರಂತ. ಹಾಸನ ಕ್ಷೇತ್ರಕ್ಕೆ ಇದು ಸೀಮಿತವಾಗಿಲ್ಲ. ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಕಡೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಸಹೋದರರ ಕಿತ್ತಾಟ ಮುಂದುವರಿದಿದೆ. ಈಗಾಗಲೇ ಅಲ್ಲಿ ಕಾಂಗ್ರೆಸ್ ನಿಂದ ಬಂದ ಧನಂಜಯ ಅವರನ್ನು ಅಭ್ಯರ್ಥಿಯಾಗಿ ಕುಮಾರಸ್ವಾಮಿ ಘೋಷಿಸಿದ್ದು ಅವರು ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ವೈ.ಎಸ್.ವಿ.ದತ್ತ ಎಡಬಿಡಂಗಿತನ:
ಇಂತಹ ಹೊತ್ತಿನಲ್ಲೇ ದೇವೇಗೌಡರ ಜತೆಗಿನ ನಾಲ್ಕು ದಶಕಗಳ ಆತ್ಮೀಯ ಸಂಬಂಧವನ್ನೂ ತೊರೆದು ಅವರ ಕಡು ರಾಜಕೀಯ ವಿರೋಧಿ ಸಿದ್ದರಾಮಯ್ಯ ನಾಯಕತ್ವ ಬಯಸಿ ಕಾಂಗ್ರೆಸ್ ಸೇರಿದ ಮಾಜಿ ಮಾನಸ ಪುತ್ರ ವೈ.ಎಸ್.ವಿ ದತ್ತ ಅವರನ್ನು ಮತ್ತೆ ಪಕ್ಷಕ್ಕೆ ವಾಪಸು ಕರೆ ತಂದು ಕಡೂರಿನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ರೇವಣ್ಣ ಪ್ರಯತ್ನದ ವಿರುದ್ಧ ಕುಮಾರಸ್ವಾಮಿ ಹಾಗೂ ಕಡೂರಿನ ಜೆಡಿಎಸ್ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಜನತಾದಳದಲ್ಲಿದ್ದರೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರವರಿಗೆ ತಮ್ಮ ಗುಪ್ತ ನಿಷ್ಠೆ ಕಾಪಾಡಿಕೊಂಡು ಬರುತ್ತಿದ್ದ ದತ್ತ ಕುರಿತಾಗಿ ಕುಮಾರಸ್ವಾಮಿಗೆ ಮೊದಲಿನಿಂದಲೂ ಅಸಹನೆ ಇತ್ತು. ದೇವೇಗೌಡರ ಮನೆಯಲ್ಲಿ ನಡೆಯುತ್ತಿದ್ದ ಕೆಲವೊಂದು ರಾಜಕೀಯ ಚಟುವಟಿಕೆಗಳ ಯಥಾವತ್ ವರದಿ ಸಿದ್ದರಾಮಯ್ಯ ಅವರಿಗೆ ದತ್ತ ತಲುಪಿಸುತ್ತಿದ್ದರು. ಇದೊಂದು ಪರಮ ವಿಶ್ವಾಸ ದ್ರೋಹ ಎಂಬುದು ಕುಮಾರಸ್ವಾಮಿ ಆಪ್ತ ವಲಯಗಳ ಆರೋಪ.
ದತ್ತ ಕಾಂಗ್ರೆಸ್ ಸೇರಿದ ನಂತರ ಆ ಪಕ್ಷದ ನಾಯಕತ್ವಕ್ಕೂ ನಿಷ್ಠರಾಗಲಿಲ್ಲ. ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧವೇ ಪಿತೂರಿ ನಡೆಸಿದರು. ಅವರ ವಿರುದ್ಧವೇ ತಮ್ಮ ಆತ್ಮೀಯರ ಬಳಿ ಅಪಮಾನದ ಮಾತುಗಳನ್ನು ಆಡಿದರು. ಕಡೆಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದಾಗ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿ ಜನರನ್ನು ನಂಬಿಸಿದರು. ಇದೇ ವೇಳೆ ತಮ್ಮ ಹಳೇ ಪಕ್ಷದ ನಾಯಕರೊಂದಿಗೆ ಯಾರಿಗೂ ತಿಳಿಯದಂತೆ ಗುಪ್ತ ಸಂಧಾನ ನಡೆಸಿ ಜೆಡಿಎಸ್ ಅಭ್ಯರ್ಥಿಯಾಗುವ ಆಸೆಯಿಂದ ಮತ್ತೆ ಆ ಪಕ್ಷ ಸೇರುವ ನಿರ್ಧಾರ ಕೈಗೊಂಡಿದ್ದಾರೆ. ಇದು ಅವರ ಎಡಬಿಡಂಗಿ ತನಕ್ಕೆ ನೇರ ಉದಾಹರಣೆ. ದತ್ತ ಸೇರ್ಪಡೆ ಬಿಲ್ ಕುಲ್ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಬಿಗಿ ಪಟ್ಟು ಹಿಡಿದಿದ್ದಾರೆ. ಮುಂದಿನದು ಕಾದು ನೋಡಬೇಕು.