Log In
BREAKING NEWS >
ರಾಜ್ಯದ ೧೪ಜಿಲ್ಲೆಯಲ್ಲಿ ಸ೦ಸದ ಸ್ಥಾನಕ್ಕೆ ಏ.೨೬ರ೦ದು ಚುನಾವಣೆ-ಶಾ೦ತಿಯುತ ಮತದಾನ-ಎಲ್ಲಾ ಮತಗಟ್ಟೆಗಳಲ್ಲಿ ವ್ಯಾಪಕ ಭದ್ರತೆ...

ಕೆ.ಎಸ್. ಈಶ್ವರಪ್ಪಗೆ ಬಿಜೆಪಿ ಟಿಕೆಟ್ ದೌಟು! ಪುತ್ರನ ಪರ ಲಾಬಿ

ಬೆಂಗಳೂರು: ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ಎರಡು ಮನಸ್ಸಿನಲ್ಲಿದೆ. ಟಿಕೆಟ್ ನೀಡದಿರಲು ಪಕ್ಷವು ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಹೊಸ ಮುಖಕ್ಕಾಗಿ ಹುಡುಕಾಟ ನಡೆಸುತ್ತಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ಈಶ್ವರಪ್ಪ ಬಿಜೆಪಿಯಲ್ಲಿ ಕುರುಬ ಸಮುದಾಯದ ಪ್ರಮುಖ ನಾಯಕರಾಗಿದ್ದು, ಕಟ್ಟಾ ಹಿಂದುತ್ವವಾದಿಯೂ ಹೌದು. ಕೆಂಪು ಕೋಟೆಯ ಮೇಲೆ ‘ಭಗವಾ’ ಧ್ವಜಾರೋಹಣ, ಆಜಾನ್ ಮತ್ತು ಅಲ್ಪಸಂಖ್ಯಾತರ ವಿರೋಧಿ, ವಿಶೇಷವಾಗಿ ಮುಸ್ಲಿಂ ಮೂಲಭೂತವಾದದ ವಿರುದ್ಧ ಅವರ ಹೇಳಿಕೆಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿವೆ.

ಈಶ್ವರಪ್ಪ ಮತ್ತು ಯಡಿಯೂರಪ್ಪ ಸಮಕಾಲೀನರು. ಯಡಿಯೂರಪ್ಪ ಅವರಿಗೆ ಚುನಾವಣಾ ರಾಜಕೀಯದಲ್ಲಿ ಮುಂದುವರಿಯಲು ಅವಕಾಶ ನಿರಾಕರಿಸಿರುವಾಗ ಈಶ್ವರಪ್ಪ ಅವರಿಗೆ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆಯಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ, ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್‌ಗಾಗಿ ಟಿಕೆಟ್‌ಗಾಗಿ ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಈಶ್ವರಪ್ಪ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಉಪ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ.

ಗುತ್ತಿಗೆದಾರ ಹಾಗೂ ಬಿಜೆಪಿ ಮುಖಂಡ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು. ತಮ್ಮ ಪರಿಸ್ಥಿತಿಗೆ ಈಶ್ವರಪ್ಪ ಅವರೇ ಕಾರಣ ಎಂದು ಸಂತೋಷ್ ಪಾಟೀಲ್ ಸೂಸೈಡ್ ನೋಟ್ ನಲ್ಲಿ ಉಲ್ಲೇಖಿಸಿದ್ದರು. ಆದಾಗ್ಯೂ, ತದನಂತರ ನಡೆದ ತನಿಖೆಯಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.

ಕ್ಲೀನ್ ಚಿಟ್ ಇದ್ದರೂ ಈಶ್ವರಪ್ಪ ಮತ್ತೆ ಸಂಪುಟ ಸೇರಲು ಸಾಧ್ಯವಾಗಲಿಲ್ಲ. ಅವರ ಸೇವೆಯನ್ನು ಸಂಘಟನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಪಕ್ಷ ಚಿಂತನೆ ನಡೆಸಿದೆ. ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಸ್ಥಳೀಯ ಮುಖಂಡ ಆಯನೂರು ಮಂಜುನಾಥ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಂಘ ಪರಿವಾರದ ನಿಕಟವರ್ತಿ, ಸಾಮಾಜಿಕ ಕಾರ್ಯಕರ್ತ, ಚಾಣಾಕ್ಷ ವ್ಯಕ್ತಿ ಧನಂಜಯ ಅವರಿಗೆ ಟಿಕೆಟ್ ಸಿಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

No Comments

Leave A Comment