Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಕಣಕ್ಕಿಳಿಯುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸುಳಿವು ನೀಡಿದ್ದಾರೆ.

ಇದಕ್ಕೆ ಪಕ್ಷದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ‘ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ನಾವು ಕಠಿಣ ಹೋರಾಟ ನಡೆಸುತ್ತೇವೆ. ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆದರೆ, ಅಂತಿಮ ನಿರ್ಧಾರವನ್ನು ಯಡಿಯೂರಪ್ಪ ಮತ್ತು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ’ ಎಂದರು.

ಈ ಮಧ್ಯೆ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಮೈಸೂರು ಜಿಲ್ಲೆಗೆ ಭೇಟಿ ನೀಡಿದ್ದು, ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ವರುಣಾ ಕ್ಷೇತ್ರದ ಮುಖಂಡರ ಜತೆ ಸಭೆ ನಡೆಸುವ ಸಾಧ್ಯತೆ ಇದೆ. ವಿಜಯೇಂದ್ರ ಸ್ಪರ್ಧೆ ಹಿನ್ನೆಲೆಯಲ್ಲಿ ಅವರ ಮೈಸೂರು ಭೇಟಿ ಮಹತ್ವ ಪಡೆದುಕೊಂಡಿದೆ.

ವರುಣಾ ಕ್ಷೇತ್ರದಿಂದ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಯಡಿಯೂರಪ್ಪ ಈ ಹಿಂದೆ ಹೇಳಿಕೆ ನೀಡಿದ್ದರು. ವರುಣಾದಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ. ಸಿದ್ದರಾಮಯ್ಯ ಅವರಿಗೆ ಅಷ್ಟು ಸುಲಭವಾಗಿ ಗೆಲುವು ಸಿಗುವುದಿಲ್ಲ. ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಅವರು ಹೇಳಿದ್ದರು.

ವರುಣಾದಿಂದ ವಿಜಯೇಂದ್ರರನ್ನು ಕಣಕ್ಕಿಳಿಸುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎದುರಾಳಿಗಳ ಬಗ್ಗೆ ನಾನೆಂದೂ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದರು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಯಡಿಯೂರಪ್ಪ ಅವರನ್ನೇ ಸ್ವಾಗತಿಸುವುದಾಗಿ ಹೇಳಿದ್ದಾರೆ.

ಇದು ತಮ್ಮ ಕೊನೆಯ ಚುನಾವಣೆಯಾಗಿದ್ದು, ರಾಜಕೀಯ ಜೀವನ ಆರಂಭಿಸಿದ ಸ್ಥಳೀಯ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆಯ ಮೇರೆಗೆ ಟಿಕೆಟ್ ನೀಡಲಾಗಿದೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

No Comments

Leave A Comment