ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ
ವಾರಣಾಸಿ:ಮಾ 26. ಭೋಜ್‌ಪುರಿ ನಟಿ ಅಕಾಂಕ್ಷಾ ದುಬೆ ಅವರು ವಾರಣಾಸಿಯ ಖಾಸಗಿ ಹೊಟೇಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಭೋಜ್‌ಪುರಿ ಚಿತ್ರರಂಗದ ಡ್ರೀಮ್ ಗರ್ಲ್ ಎಂದೇ ಖ್ಯಾತರಾಗಿದ್ದ 25 ವರ್ಷದ ಆಕಾಂಕ್ಷಾ ದುಬೆ ಶೂಟಿಂಗ್ ಹಿನ್ನೆಲೆಯಲ್ಲಿ ವಾರಣಾಸಿಗೆ ಆಗಮಿಸಿದ್ದರು. ಶೂಟಿಂಗ್ ಮುಗಿದ ಬಳಿಕ ಹೊಟೇಲ್‌ಗೆ ಹೋಗಿದ್ದು, ಭಾನುವಾರ ಬೆಳಗ್ಗೆ ಅವರಿದ್ದ ಕೊಠಡಿ ಬಾಗಿಲು ತೆರೆದಾಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನು ಮೃತದೇಹ ಪತ್ತೆಯಾಗುವುದಕ್ಕೆ ಕೆಲವೇ ಗಂಟೆಗಳಿಗೆ ಮುನ್ನ ಭೋಜ್‌ಪುರಿಯ ಹಿಲೋರೆ ಮಾರೆ ಹಾಡಿಗೆ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು.
ಭೋಜ್‌ಪುರಿ ಚಿತ್ರರಂಗದ ಪವರ್ ಸ್ಟಾರ್ ನಟ ಪವನ್ ಸಿಂಗ್ ಅವರೊಂದಿಗೆ ಆಕಾಂಕ್ಷ ನಟಿಸಿರುವ ಮ್ಯೂಸಿಕ್ ವೀಡಿಯೋ ಇಂದು ಬಿಡುಗಡೆಗೊಂಡಿದೆ. ಆದರೆ ಈ ವೀಡಿಯೋ ಬಿಡುಗಡೆ ದಿನವೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಿರ್ಜಾಪುರದ ವಿಂಧ್ಯಚಲ್ ಮೂಲದ ಆಕಾಂಕ್ಷಾ ಬಳಿಕ ಹೆತ್ತವರೊಂದಿಗೆ ಮುಂಬೈಗೆ ಬಂದು ವಾಸವಾಗಿದ್ದರು. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಎಂಬುದು ತಿಳಿದು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.