``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......
ಕರ್ನಾಟಕ ಚುನಾವಣೆ: ಜೆಡಿಎಸ್ ಪರ ತೆಲಂಗಾಣ ಸಿಎಂ ಕೆಸಿಆರ್, ಬಂಗಾಳ ಸಿಎಂ ದೀದಿ ಪ್ರಚಾರ: ವರದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಅಧಿಕಾರದ ಮೇಲೆ ಕಣ್ಣಿಟ್ಟಿರುವ ಜಾತ್ಯಾತೀತ ಜನತಾ ದಳದ ಪರವಾಗಿ ತೆಲಂಗಾಣ ಸಿಎಂ ಹಾಗೂ ಬಿಆರ್ ಎಸ್ ಪಕ್ಷದ ಮುಖ್ಯಸ್ತ ಕೆ ಚಂದ್ರಶೇಖರ ರಾವ್ ಮತ್ತು ತೃಣಮೂಲ ಕಾಂಗ್ರೆಸ್ ಅಧಿನಾಯಕಿ, ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಜನತಾದಳ (ಜಾತ್ಯತೀತ)ವನ್ನು “ನೈಸರ್ಗಿಕ ಮಿತ್ರ” ಎಂದು ಬಣ್ಣಿಸಿರುವ ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಪಕ್ಷಕ್ಕೆ ತನ್ನ ಸಂಪೂರ್ಣ ಬೆಂಬಲ ಘೋಷಣೆ ಮಾಡಿದ್ದು, ಪಕ್ಷದ ಪರ ಪ್ರಚಾರ ನಡೆಸಲು ನಿರ್ಧರಿಸಿದೆ ಎಂದು ಬಿಆರ್ಎಸ್ ಮೂಲಗಳು ಭಾನುವಾರ ತಿಳಿಸಿವೆ.
ತೆಲಂಗಾಣದ ಆಡಳಿತ ಪಕ್ಷ ಕೂಡ ಆಗಿರುವ ಇತ್ತೀಚೆಗಷ್ಟೇ ತನ್ನ ಟಿಆರ್ ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಪಕ್ಷವನ್ನು ಬಿಆರ್ ಎಸ್ (ಭಾರತ ರಾಷ್ಟ್ರ ಸಮಿತಿ) ಎಂದು ಮರು ನಾಮಕರಣ ಮಾಡಿ ರಾಷ್ಟ್ರೀಯವಾಗಿ ಪಕ್ಷವಾಗಿ ಘೋಷಣೆ ಮಾಡಿತ್ತು. ತನ್ನ ಪಕ್ಷ ವಿಸ್ತರಣೆ ಕಾರ್ಯತಂತ್ರದ ಭಾಗವಾಗಿ ಕಲ್ಯಾಣ ಕರ್ನಾಟಕದಲ್ಲಿ (ಹಿಂದೆ ಹೈದರಾಬಾದ್-ಕರ್ನಾಟಕ ಎಂದು ಕರೆಯಲಾಗುತ್ತಿತ್ತು) ತೆಲಂಗಾಣದ ಗಡಿಯಲ್ಲಿರುವ ಕೆಲವು ಜಿಲ್ಲೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆಯ್ಕೆಯನ್ನು ಸಹ ಬಿಆರ್ ಎಸ್ ಹೊಂದಿದ್ದು, ಇದೀಗ ಆ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡುವ ಹಂತದಲ್ಲಿದೆ. ಇದರ ಮೊದಲ ಹಂತವಾಗಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಆ ಪಕ್ಷಕ್ಕೆ ಬೆಂಬಲ ನೀಡಿ, ಅದರ ಪ್ರಚಾರ ಮಾಡಿ ಕಲ್ಯಾಣ ಕರ್ನಾಟಕದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಬಿಆರ್ ಎಸ್ ರಾಷ್ಟ್ರೀಯ ಪಕ್ಷದ ಶುಭಾರಂಭ ಮಾಡುವ ಯೋಚನೆಯಲ್ಲಿದೆ ಎಂದು ಹೇಳಲಾಗಿದೆ.
ಇದಕ್ಕೆ ಇಂಬು ನೀಡುವಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ತೆಲಂಗಾಣ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್‌ನ ಹಿರಿಯ ನಾಯಕ ಕೆ ಚಂದ್ರಶೇಖರ್ ರಾವ್ ಅವರು, “ಜೆಡಿ (ಎಸ್) ನಮ್ಮ ಸಹಜ ಮಿತ್ರ ಮತ್ತು ನಾವು ಪಕ್ಷದೊಂದಿಗೆ ಹೋಗುತ್ತೇವೆ. ಚುನಾವಣೆಯಲ್ಲಿ ಜೆಡಿ (ಎಸ್) ಯಶಸ್ವಿಯಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ.. ಅದರ ಪರ ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಜೆಡಿಎಸ್ ಮೂಲಗಳ ಪ್ರಕಾರ, ಕೆಸಿಆರ್ ಅವರು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದು, ವಿಶೇಷವಾಗಿ “ತೆಲುಗು ಮಾತನಾಡುವ ಜನರು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಬಿಆರ್‌ಎಸ್ ನಾಯಕ ರಾವ್ ಪ್ರಚಾರ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಜೆಡಿಎಸ್ ಗೆ ದೀದಿಯಿಂದಲೂ ಬೆಂಬಲ…
ಇನ್ನು ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಳೆದ ವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾದಲ್ಲಿ ಭೇಟಿಯಾಗಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುವಂತೆ ಟಿಎಂಸಿ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ. ಭೇಟಿ ವೇಳೆ ಕುಮಾರಸ್ವಾಮಿ, “ಕರ್ನಾಟಕದಲ್ಲಿ ಪ್ರಚಾರ ಮಾಡುವಂತೆ ಕುಮಾರಸ್ವಾಮಿ ಅವರ ಮನವಿಗೆ ಮಮತಾ ಬ್ಯಾನರ್ಜಿ ಒಪ್ಪಿದ್ದಾರೆ. ಅವರು ವೇಳಾಪಟ್ಟಿಯನ್ನು ಕಳುಹಿಸುವಂತೆ ಕೇಳಿದ್ದಾರೆ” ಎಂದು ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿ ನಡೆದ ಸಭೆಯ ನಂತರ ಜೆಡಿ (ಎಸ್) ನಾಯಕರೊಬ್ಬರು ಹೇಳಿದ್ದಾರೆ.
ಈ ಹಿಂದೆ ವರ್ಷದ ಲೋಕಸಭೆ ಚುನಾವಣೆಗೆ ಮುನ್ನ 2019 ರ ಜನವರಿಯಲ್ಲಿ ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಕರೆದಿದ್ದ ವಿರೋಧ ಪಕ್ಷಗಳ ಸಭೆಯಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದರು. ಇದೀಗ ಮೇ ವೇಳೆಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.