Log In
BREAKING NEWS >
ಮಾ.28ರ೦ದು ಸ೦ಜೆ 6.30ಕ್ಕೆ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಪದ್ಮನಾಭ ದೇವಸ್ಥಾನದ ವಠಾರದಲ್ಲಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ ಜರಗಲಿದೆ....

ಲಿಂಗಾಯತ ಪಂಚಮಸಾಲಿಗೆ 2 ಸಿ, 2 ಡಿ ಮೀಸಲಾತಿ: ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್, ಸರ್ಕಾರಕ್ಕೆ ಬಿಗ್ ರಿಲೀಫ್

ಬೆಂಗಳೂರು: ಲಿಂಗಾಯತ ಪಂಚಮಸಾಲಿಗೆ 2ಸಿ, 2ಡಿ ಮೀಸಲಾತಿ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಗುರುವಾರ ತೆರವುಗೊಳಿಸಿದ್ದು, ಆದೇಶದಿಂದ ರಾಜ್ಯ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡಬಾರದು ಮತ್ತು ಮೀಸಲು ಪ್ರವರ್ಗ ಮಾರ್ಪಾಡು ಮಾಡುವಂತೆ ಕೋರಿ ಯಾವುದೇ ಉಪಜಾತಿ, ಸಮುದಾಯ ಬುಡಕಟ್ಟುಗಳು ಸಲ್ಲಿಸುವ ವೈಯಕ್ತಿಕ ಬೇಡಿಕೆಗಳನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸದಂತೆ ತಡೆ ನೀಡಬೇಕೆಂದು ಡಿ.ಜಿ.ರಾಘವೇಂದ್ರ ಎಂಬುವರು ಪಿಐಎಲ್​ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಪೀಠ ಮಧ್ಯಂತರ ತಡೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಪ್ರವರ್ಗ 2ಎ ಸೇರ್ಪಡೆ ಮಾಡುವ ಅಥವಾ 2ಸಿ, 2ಡಿ ಪ್ರವರ್ಗ ಸೃಷ್ಟಿಸಲು ಸರ್ಕಾರ ಕೈಗೊಂಡಿದ್ದ ನಿರ್ಣಯದ ಮುಂದಿನ ಪ್ರಕ್ರಿಯೆಗಳಿಗೆ ತಾತ್ಕಾಲಿಕ ತಡೆ ಬಿದ್ದಿತ್ತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ರಾಜ್ಯ ಸರ್ಕಾರವು 2ಎ‌ ಪ್ರವರ್ಗಕ್ಕೆ ಯಾವುದೇ ತೊಂದರೆ ಆಗದಂತೆ ನಡೆದುಕೊಳ್ಳಲಾಗುವುದು. ಹೀಗಾಗಿ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿರುವ ಆದೇಶ ತೆರವು ಮಾಡಬೇಕು ಎಂದು ಕೋರಿದರು.

ಅಲ್ಲದೇ, ಈ‌ ಕುರಿತು ದಿನದ ಅಂತ್ಯದೊಳಗೆ ಲಿಖಿತ ಹೇಳಿಕೆಯನ್ನು ಸಲ್ಲಿಸಲಾಗುವುದು ಎಂದು ಸರ್ಕಾರಿ ವಕೀಲರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಸರ್ಕಾರ ಮುಂದೆ ಕೈಗೊಳ್ಳುವ ಎಲ್ಲ ಕ್ರಮಗಳು ಈ ಅರ್ಜಿ‌ ಕುರಿತಂತೆ ನ್ಯಾಯಾಲಯ ಹೊರಡಿಸುವ ಅಂತಿಮ‌ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿತು.

ಈ ಹಿಂದೆ ನಡೆದ ಅರ್ಜಿಯ ವಿಚಾರಣೆ ವೇಳೆ ಸರ್ಕಾರ, ಸಮುದಾಯವನ್ನು ಹಿಂದುಳಿದ ವರ್ಗಗಳ ಅಡಿ ಮೀಸಲು ಕಲ್ಪಿಸಲು ಕೋರಿದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ರಾಜ್ಯ ಸರ್ಕಾರ, ಪ್ರತಿ ಹತ್ತು ವರ್ಷಕ್ಕೊಮ್ಮೆ ಹಿಂದುಳಿದ ವರ್ಗಗಳ ಮೀಸಲು ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರ ತನಗೆ ಇದೆ ಎಂದು ಪ್ರತಿಪಾದಿಸಿತ್ತು.

ಅಲ್ಲದೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ-1995ರ ಸೆಕ್ಷನ್ 9ರ ಪ್ರಕಾರ ಯಾವುದಾದರೂ ಒಂದು ಸಮುದಾಯವು ತನ್ನನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಮನವಿ ಸಲ್ಲಿಸಿದರೆ, ಅದನ್ನು ಪರಿಶೀಲಿಸುವುದಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅವಕಾಶವಿದೆ. ನಿಯಮಗಳ ಪ್ರಕಾರ ಆಯೋಗವು ಮನವಿ ಮಾಡಿರುವ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದೆಯೇ ವಿಚಾರಣೆ/ಸಮೀಕ್ಷೆ/ತನಿಖೆ ನಡೆಸಿ ನಾಗರಿಕರ ಹಿಂದುಳಿದ ವರ್ಗಗಳ ವರ್ಗೀಕರಣದ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಆಕ್ಷೇಪಣೆಯಲ್ಲಿ ಸರ್ಕಾರ ತಿಳಿಸಿತ್ತು. ಅಲ್ಲದೆ, ಕಾಯ್ದೆಯ ಸೆಕ್ಷನ್ 11ರ ಪ್ರಕಾರ ರಾಜ್ಯ ಸರ್ಕಾರವು ಆಯೋಗದೊಂದಿಗೆ ಸಮಾಲೋಚಿಸಿ ಪ್ರತಿ ಹತ್ತು ವರ್ಷಗಳಿಗೊಮ್ಮೆ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಬಹುದಾಗಿದೆ. ಈ ರೀತಿಯಲ್ಲಿ ಒಂದಲ್ಲಾ ಒಂದು ಸಮುದಾಯ ಸಲ್ಲಿಸುವ ಮನವಿಯನ್ನು ಸದಾಶಿವ ಆಯೋಗದ ಮಂದೆ ಪರಿಗಣನೆಯಲ್ಲಿರುತ್ತದೆ. ಇದು ಸಹ ನಿರಂತರ ಪ್ರಕ್ರಿಯೆಯಾಗಿದೆ ಎಂದು ಆಕ್ಷೇಪಣೆಯಲ್ಲಿ ಸರ್ಕಾರ ವಿವರಿಸಿದೆ.

ಆಯೋಗ ಸಹ ಕಾಲ ಕಾಲಕ್ಕೆ ಸರ್ಕಾರಕ್ಕೆ ಹಲವು ಶಿಫಾರಸು ಮಾಡಿದ್ದು, ಅದಕ್ಕೆ ಅನುಗುಣವಾಗಿ ಸರ್ಕಾರವು ಹಲವು ಹಿಂದುಳಿದ ವರ್ಗಗಳನ್ನು ವರ್ಗೀಕರಣ ಮತ್ತು ಮರುವರ್ಗೀಕರಣ ಮಾಡಿಕೊಂಡು ಬಂದಿದೆ. ಯಾವುದೇ ಹಿಂದುಳಿದ ವರ್ಗದ ವ್ಯಕ್ತಿಯ ಸಾಮಾಜಿಕ ಸ್ಥಿತಿಗತಿ ಒಂದೇ ರೀತಿ ಇರುವುದಿಲ್ಲ. ತೀರಾ ಹಿಂದುಳಿದ ವರ್ಗದ ವ್ಯಕ್ತಿ ಭವಿಷ್ಯದಲ್ಲಿ ಮುಂದುವರೆದ ವರ್ಗಕ್ಕೆ ವರ್ಗಾವಣೆಯಾಗಬಹುದು ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

ಲಿಂಗಾಯತ ಪಂಚಮಸಾಲಿ ಸಮುದಾಯವು ತನ್ನನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲು ಕಲ್ಪಿಸಲು ಕೋರಿದೆ. ಆ ಬಗ್ಗೆ ಆಯೋಗವು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಅದನ್ನು ಸರ್ಕಾರ ಈಗಾಗಲೇ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದೆ.

ಈ ಅರ್ಜಿ ಸಲ್ಲಿಸಿರುವ ಅರ್ಜಿದಾರರ ನಡೆಯು ಅಕಾಲಿಕವಾಗಿದೆ. ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲವಾಗಿದೆ. ಆದ್ದರಿಂದ ಅರ್ಜಿ ವಿಚಾರಣಾ ಮಾನ್ಯತೆ ಹೊಂದಿಲ್ಲ ಹಾಗೂ ವಜಾಗೊಳಿಸಲು ಅರ್ಹವಾಗಿದೆ ಎಂದು ಆಕ್ಷೇಪಣೆಯಲ್ಲಿ ಸರ್ಕಾರ ನ್ಯಾಯಾಲಯವನ್ನು ಕೋರಿದೆ.

No Comments

Leave A Comment