ನಾನು ಮನಸ್ಸು ಮಾಡದಿರುತ್ತಿದ್ದರೆ ಮಂಡ್ಯದ ಅಕ್ರಮ ಗಣಿಗಾರಿಕೆ ನಿಲ್ಲುತ್ತಿರಲಿಲ್ಲ, ಮೈ ಶುಗರ್ ಫ್ಯಾಕ್ಟರಿ ಮತ್ತೆ ಆರಂಭವಾಗುತ್ತಿರಲಿಲ್ಲ: ಸುಮಲತಾ ಅಂಬರೀಷ್
ಮಂಡ್ಯ: ಆಕಸ್ಮಿಕವಾಗಿ ನಾನು ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದು, ಅಂದಿನ ಮೈತ್ರಿ ಸರ್ಕಾರವನ್ನೇ ಎದುರು ಹಾಕಿಕೊಂಡು ಚುನಾವಣೆಯನ್ನು ಮಂಡ್ಯದ ಸ್ವಾಭಿಮಾನ ಜನತೆಯ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸಿ ಗೆದ್ದೆ. ಈ ವೇಳೆ ಹಲವು ಸವಾಲುಗಳು ಎದುರಾದವು. ನನ್ನನ್ನು ಹೆಜ್ಜೆಹೆಜ್ಜೆಗೂ ಅವಮಾನ ಮಾಡುತ್ತಾ ಹೋದರು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಭಾವುಕರಾಗಿ ಹೇಳಿದರು.
ಇಂದು ಮಂಡ್ಯದ ತಮ್ಮ ಸಂಸದರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದೆಯಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ ನನ್ನನ್ನು ಹೆಣ್ಣೆಂದು ಬಿಡಿ, ಸಂಸದೆ ಎಂದು ಕೂಡ ಗೌರವ ತೋರಲಿಲ್ಲ, ಚುಚ್ಚುತ್ತಾ ಹೋದರು, ಏನೂ ಕೆಲಸ ಮಾಡುತ್ತಿಲ್ಲ ಎಂದು ಅಪಪ್ರಚಾರ ಮಾಡಿದರು ಎಂದು ಭಾವುಕರಾಗಿ ಹೇಳಿದರು.
ನಾನು ಸಂಸದೆಯಾಗಿ ಏನೂ ಮಾಡಿಲ್ಲ ಎಂದು ರಾಜಕೀಯವಾಗಿ ಹೇಳಬಹುದು, ಆದರೆ ನಿಜಾಂಶ ಬೇರೆ ಇದೆ, ನಾನು ಸಂಸದೆಯಾಗದಿದ್ದಿದ್ದರೆ ಮೈಶುಗರ್ ಫ್ಯಾಕ್ಟರಿ ಪುನರಾರಂಭವಾಗುತ್ತಿರಲಿಲ್ಲ, ಮಂಡ್ಯ ಸಕ್ಕರೆ ಕಾರ್ಖಾನೆ ಇಂದು ಕೆಲಸ ಮಾಡುತ್ತಿರಲಿಲ್ಲ, ಅಕ್ರಮ ಗಣಿಗಾರಿಕೆ ನಿಲ್ಲುತ್ತಿರಲಿಲ್ಲ ಎಂದರು.
ನಾನು ಸಂಸದೆಯಾದ 9 ತಿಂಗಳಲ್ಲಿ ಕೋವಿಡ್ ಸೋಂಕು ಆರಂಭವಾಯಿತು. ಆ ಕಷ್ಟದ ಸಂದರ್ಭದಲ್ಲಿ ಜನರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದರೂ ನಾನು ಏನೂ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಾ ಬಂದರು. ಚುನಾವಣೆ ಸಂದರ್ಭದಲ್ಲಿ ಸರಿ, ರಾಜಕೀಯಕ್ಕೆ ಮಾಡುತ್ತಾರೆ ಎನ್ನಬಹುದು, ಆದರೆ ನನ್ನ ವಿಚಾರದಲ್ಲಿ ನಾಲ್ಕು ವರ್ಷಗಳಿಂದಲೂ ಅಪಪ್ರಚಾರ, ಪ್ರಹಾರ ಮಾಡಲಾಗುತ್ತಿದೆ ಎಂದು ತಾವು ಸಂಸದೆಯಾಗಿ ಇಲ್ಲಿಯವರೆಗೆ ಮಾಡಿರುವ ಕೆಲಸಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.