ತಾಳ್ಮೆ ಮೀರುತ್ತಿದೆ, ಕಿರುಕುಳದಿಂದ ಯಾವುದೇ ಸಮಸ್ಯೆಯಾದರೆ…: ಕೇಂದ್ರಕ್ಕೆ ಲಾಲು ಪುತ್ರಿ ಎಚ್ಚರಿಕೆ
ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ವಿಚಾರಣೆಗೆ ಒಳಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ತಂದೆಗೆ ಮೂತ್ರಪಿಂಡ ದಾನ ಮಾಡಿರುವ ಲಾಲು ಪುತ್ರಿ ರೋಹಿಣಿ ಆಚಾರ್ಯ ಅವರು, ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಂದೆಗೆ “ಕಿರುಕುಳ” ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಂಗಾಪುರದಲ್ಲಿರುವ ರೋಹಿಣಿ ಆಚಾರ್ಯ ಅವರು, ತಮ್ಮ ತಂದೆ ರೈಲ್ವೇ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
“ಇವರು ನಮ್ಮ ತಂದೆಗೆ ಕಿರುಕುಳ ನೀಡುತ್ತಿದ್ದಾರೆ. ಈ ಕಿರುಕುಳದಿಂದ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಯಾದರೆ, ನಾವು ದೆಹಲಿಯ ಅಧಿಕಾರದ ಗದ್ದುಗೆಯನ್ನು ಅಲುಗಾಡಿಸುತ್ತೇವೆ. ತಾಳ್ಮೆ ಮೀರುತ್ತಿದೆ” ಎಂದು ರೋಹಿಣಿ ಆಚಾರ್ಯ ಅವರು ಟ್ವೀಟ್ ಮಾಡಿದ್ದಾರೆ.