ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಉಡುಪಿ: ‘ಗೆಲ್ಲುವವರನ್ನು ಸೋಲಿಸುವ ಶಕ್ತಿ ಬಂಟ ಸಮುದಾಯಕ್ಕಿದೆ’ – ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ: ಮಾ 07, ಗೆಲ್ಲುವವರನ್ನು ಸೋಲಿಸುವ, ಸೋಲುವವರನ್ನು ಗೆಲ್ಲಿಸುವ ಶಕ್ತಿ ಬಂಟ ಸಮುದಾಯಕ್ಕೆ ಇದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಮತ್ತು ಉಡುಪಿ ಬಂಟರ ಸಂಘದ ಗೌರವಾಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಜಾಗತಿಕ ಬಂಟರ ಸಂಘದ ಮೂಲಕ ಬಂಟರ ಬಹು ಅಗತ್ಯದ ಎರಡು ಬೇಡಿಕೆಗಳಾದ ಮೀಸಲಾತಿ ಅಂದರೆ ಹಿಂದುಳಿದ ವರ್ಗದ 3ಬಿಯಲ್ಲಿದ್ದ ಮೀಸಲಾತಿಯನ್ನು 2ಎ.ವರ್ಗಕ್ಕೆ ಸೇರಿಸಬೇಕು. ಆದೇ ರೀತಿಯಲ್ಲಿ ಬಂಟ ಸಮುದಾಯದವರಿಗೆ ನಿಗಮ ರೂಪಿಸಿಕೊಡಬೇಕು ಅನ್ನುವ ನಮ್ಮ ಈ ಎರಡು ಬೇಡಿಕೆಗಳನ್ನು ಕರ್ನಾಟಕ ಸರ್ಕಾರಕ್ಕೆ ಬಹು ವರುಷಗಳ ಹಿಂದೆಯೇ ಮನವಿ ಸಲ್ಲಿಸಿದ್ದೇವೆ. ಆದರೆ ಸರ್ಕಾರ ಈ ಎರಡು ಬಹು ಮುಖ್ಯ ಬೇಡಿಕೆಗಳ ಬಗ್ಗೆ ಗಂಭೀರ ಮೌನ ವಹಿಸಿರುವುದು ಬಂಟರ ಬಡ ವರ್ಗದಿಂದ ಹಿಡಿದು ಮಧ್ಯಮ ಹಾಗೂ ಶ್ರೀಮಂತ ವರ್ಗದ ಗ್ರಾಮೀಣ ಪ್ರದೇಶದಿಂದ ಹಿಡಿದು ದೇಶ ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವ ಬಂಟರಿಗೆ ಅತೀವ ಬೇಸರ ತಂದಿದೆ ಅನ್ನುವುದನ್ನು ನಮ್ಮ ರಾಜ್ಯದ ಬಿಜೆಪಿ ಘನ ಸರ್ಕಾರಕ್ಕೆ ನಮ್ಮೆಲ್ಲ ಬಂಟರ ಬೇಸರದ ಧ್ವನಿಯನ್ನು ತಿಳಿಸಬೇಕಾದ ಅನಿವಾರ್ಯತೆ ಬಂದಿದೆ ಎಂದರು.
ಬಂಟರು ಎಂದರೆ ಬರೇ ಶ್ರೀಮಂತರು ಆಸ್ತಿವಂತರೂ ಅನ್ನುವ ತಪ್ಪು ಕಲ್ಪನೆ ಬೇಡ. ಸರಿಸುಮಾರು 30 ಲಕ್ಷಕ್ಕೂ ಮಿಕ್ಕಿ ಬಂಟರ ಜನಸಂಖ್ಯೆ ಈ ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಇದೆ. ಇದರಲ್ಲಿ ಸರಿ ಸುಮಾರು ಶೇ.90ರಷ್ಟು ಮಂದಿ ಬಂಟರು ಬಡ ಮತ್ತು ಮಧ್ಯಮ ವರ್ಗದಲ್ಲಿಯೇ ಬದುಕನ್ನು ಕಟ್ಟಿಕೊಂಡು ಬರುತ್ತಿದ್ದಾರೆ. ಬಂಟರು ಕೃಷಿಯನ್ನೆ ಬಹು ಪ್ರಧಾನ ವೃತ್ತಿಯನ್ನಾಗಿ ಮಾಡಿಕೊಂಡು ಬಂದು ಸುಖ ಕಷ್ಟಗಳನ್ನು ಬಹು ಸಹಿಷ್ಣುತೆಯಿಂದ ಬದುಕನ್ನು ನಡೆಸಿಕೊಂಡು ಬಂದವರು, ಭೂಸುಧಾರಣೆ ಕಾಯಿದೆ ಬಂದಾಗ ಕೂಡಾ ತಮ್ಮ ಸ್ವಂತ ಆಸ್ತಿಯನ್ನು ಕಳೆದುಕೊಂಡ ಪರಿಸ್ಥಿತಿಯಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಹೊಸ ಬದುಕಿನ ವೃತ್ತಿಯನ್ನು ಕಟ್ಟಿ ಕೊಂಡವರು ತಮ್ಮ ಸ್ವಪ್ರಯತ್ನದಿಂದಲೇ ಯಶಸ್ಸು ಕಂಡವರು ಹೊರತು ಪ್ರತಿಯೊಂದಕ್ಕೂ ಸರ್ಕಾರವನ್ನು ಕೈ ಚಾಚಿ ನಿಂತವರಲ್ಲ.
ಬೇರೆ ಎಲ್ಲಾ ಜಾತಿಯವರ ಬೇಡಿಕೆಗಳಿಗೆ ಈ ಸರ್ಕಾರ ಸ್ಪಂದಿಸುತ್ತಾ ಬಂದಿರುವಾಗ ನಮ್ಮ ಈ ಎರಡು ಬೇಡಿಕೆಗಳನ್ನು ನಿರ್ಲಕ್ಷಿಸಿರುವುದು ನಮ್ಮ ಬಂಟರಿಗೆ ಅತೀವ ಬೇಸರ ತಂದಿದೆ. ಮುಂದಿರುವ ರಾಜ್ಯದ ಎಸೆಂಬ್ಲಿ ಚುನಾವಣೆಯಲ್ಲಿ ಕನಿಷ್ಟ ಪಕ್ಷ 20 ಕ್ಷೇತ್ರಗಳಲ್ಲಿ ನಮ್ಮ ಬಂಟರ ಸಾಮರ್ಥ್ಯ ಏನು ಅನ್ನುವುದನ್ನು ನಮ್ಮ ಬೇಡಿಕೆಯನ್ನು ಮಾನ್ಯ ಮಾಡದೆ ತಿರಸ್ಕರಿಸಿದ ಆಡಳಿತರೂಢ ಪಕ್ಷಕ್ಕೆ ನೇರವಾಗಿ ತೋರಿಸಬೇಕಾದ ಅನಿವಾರ್ಯತೆ ಬರಬಹುದು ಅನ್ನುವ ಎಚ್ಚರಿಕೆಯ ಮಾತುಗಳನ್ನು ತಿಳಿಸುವ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಇಂದ್ರಾಳಿ ಜಯಕರ ಶೆಟ್ಟಿ ತಿಳಿಸಿದರು.
ಅಲ್ಲದೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಜಾಗತಿಕ ಮಟ್ಟದ ಎಲ್ಲಾ ಬಂಟರ ಸಂಘಟನೆಗಳು ಸಮಸ್ತ ಬಂಟರ ಬೇಡಿಕೆ ಈಡೇರಿಸುವರೇ ಹೋರಾಟ ಮಾಡಲು ತಯಾರಾಗಿರುತ್ತೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಬಂಟರ ಸಂಘದ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ, ಮೋಹನ್ ಶೆಟ್ಟಿ ಮೂಡನಿಡಂಬೂರು, ನಿವೃತ್ತ ರಾಜ್ಯಶಾಸ್ತ್ರ ಮುಖ್ಯಸ್ಥರು ಪ್ರೊ.ಕೆ ಸುರೇಂದ್ರನಾಥ ಶೆಟ್ಟಿ, ತೋನ್ಸೆ ವಲಯ ಬಂಟರ ಸಂಘದ ಅಧ್ಯಕ್ಷರಾದ ತೋನ್ಸೆ ಮನೋಹರ್ ಶೆಟ್ಟಿ, ಕೊಡವೂರು ಬಂಟರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಉಡುಪಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಮಿತ್ ಕುಮಾರ್, ಶೆಟ್ಟಿ, ಕೃಷ್ಣ ಕುಮಾರ್ ಶೆಟ್ಟಿ, ಸಂತೋಷ್ ಶೆಟ್ಟಿ ಮತ್ತು ಇತರೆ ಬಂಟರ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.