ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಅಬಕಾರಿ ನೀತಿ ಹಗರಣ: ಮಾರ್ಚ್ 20 ರವರೆಗೆ ಮನೀಶ್ ಸಿಸೋಡಿಯಾಗೆ ದೆಹಲಿ ಕೋರ್ಟ್ ನ್ಯಾಯಾಂಗ ಬಂಧನ
ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ನ್ಯಾಯಾಲಯ ಮಾರ್ಚ್ 20 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು 14 ದಿನಗಳ ಅಂದರೆ ಮಾರ್ಚ್ 20 ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈಗ ರದ್ದುಪಡಿಸಲಾಗಿರುವ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಿಸೋಡಿಯಾ ಅವರನ್ನು ಸಿಬಿಐ ಕಳೆದ ಭಾನುವಾರ ಬಂಧಿಸಿತ್ತು. ಅಂತೆಯೇ ಸಿಸೋಡಿಯಾ ಅವರ ಸಿಬಿಐ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಇಂದು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ವೇಳೆ ನಡೆದ ವಾದ-ಪ್ರತಿವಾದದ ವೇಳೆ ಸಿಬಿಐ ಪರ ವಕೀಲರು, ಈ ಹಂತದಲ್ಲಿ, ನಾವು ಸಿಸೋಡಿಯಾ ಅವರ ಹೆಚ್ಚಿನ ಸಿಬಿಐ ಬಂಧನ ಅವಧಿಯನ್ನು ಬಯಸುವುದಿಲ್ಲ ಆದರೆ ಮುಂದಿನ 15 ದಿನಗಳಲ್ಲಿ ನಾವು ಅದನ್ನು ಕೋರಬಹುದು ಎಂದರು. ಹೀಗಾಗಿ ಕೋರ್ಟ್ ಮುಂದಿನ 14 ದಿನಗಳ ಕಾಲ ಸಿಸೋಡಿಯಾಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜೈಲಿಗೆ ಭಗವದ್ಗೀತೆ, ಡೈರಿ, ಕನ್ನಡಕಕ್ಕೆ ಸಿಸೋಡಿಯಾ ಮನವಿ: ಅನುಮತಿ ನೀಡಿದ ಕೋರ್ಟ್
ಇನ್ನು 14 ದಿನಗಳ ನ್ಯಾಯಾಂಗ ಬಂಧನದ ಹಿನ್ನಲೆಯಲ್ಲಿ ಮನೀಷ್ ಸಿಸೋಡಿಯಾ ಜೈಲಿಗೆ ತಮ್ಮ ಡೈರಿ-ಪೆನ್ನು, ಕನ್ನಡಕ ಮತ್ತು ಭಗವದ್ಗೀತೆ ಪುಸ್ತಕವನ್ನು ಒಯ್ಯಲು ಅನುಮತಿ ನೀಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾದೀಶರಾದ ಎಂಕೆ ನಾಗ್‌ಪಾಲ್ ಅವರು ಅನುಮತಿ ನೀಡಿದರು. ಅಲ್ಲದೆ ಸಿಸೋಡಿಯಾ ಅವರಿಗೆ ವೈದ್ಯರು ಶಿಫಾರಸ್ಸು ಮಾಡಿದ್ದ ಔಷಧಿಗಳನ್ನು ಒಯ್ಯಲೂ ಕೋರ್ಟ್ ಅನುಮತಿ ನೀಡಿದ್ದು, ಈ ಔಷಧಿಗಳನ್ನು ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಲು ಕೋರ್ಟ್ ಅನುಮತಿ ನೀಡಿದೆ.
ನ್ಯಾಯಾಂಗ ಬಂಧನದ ಹಿನ್ನಲೆಯಲ್ಲಿ ಸಿಸೋಡಿಯಾ ಅವರನ್ನು ದೆಹಲಿಯ ತಿಹಾರ್ ಜೈಲಿಗೆ ರವಾನಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಿಸೋಡಿಯಾ ವಿಚಾರಣೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೋಸ್ ಅವೆನ್ಯೂ ಕೋರ್ಟ್ ಸಂಕೀರ್ಣದ ಒಳಗೆ ಮತ್ತು ಹೊರಗೆ ಭಾರೀ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.