ಮಂಡ್ಯ: ಹಳಿ ದಾಟುವಾಗ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಸಾವು
ಮಂಡ್ಯ: ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಓರ್ವ ಮಹಿಳೆ ಹಾಗೂ ಓರ್ವ ವೃದ್ಧೆ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ 9 ಗಂಟೆಗೆ ಮೈಸೂರಿನಿಂದ ಮಂಡ್ಯಗೆ ಸಾವಿರಾರು ಜನರನ್ನು ಹೊತ್ತು ಬಂದ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಇಬ್ಬರು ಪ್ರಾಣ ಪಕ್ಷಿಯನ್ನು ಹಾರಿಸಿದೆ. ಓರ್ವ ಮಹಿಳೆ ಹಾಗೂ ಓರ್ವ ವೃದ್ಧೆ ಬೆಂಗಳೂರಿನಿಂದ ರೈಲಿನಲ್ಲಿ ಬಂದಿಳಿದು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಪೇಟೆ ಬೀದಿಯ ರೈಲ್ವೆ ಜಂಕ್ಷನ್ ದಾಟುವ ವೇಳೆ ಮಾಲ್ಗುಡಿ ಎಕ್ಸ್‌ಪ್ರೆಸ್ ವೇಗವಾಗಿ ಬಂದಿದೆ. ಇದನ್ನು ಕಂಡ ಜನರು ಇಬ್ಬರನ್ನು ಕೂಗಿಕೊಂಡಿದ್ದಾರೆ. ರೈಲು ಬರುವ ಶಬ್ಧಕ್ಕೆ ಜನರ ಕೂಗು ಆ ಇಬ್ಬರಿಗೆ ಕೇಳಿಲ್ಲ. ನಂತರ ರೈಲು ಬಂದು ಮಹಿಳೆ ಹಾಗೂ ವೃದ್ಧೆಯ ಮೇಲೆ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರೈಲಿಗೆ ಸಿಕ್ಕಿ ಸಾವನ್ನಪ್ಪಿದ ಮಹಿಳೆ ಮಂಡ್ಯದ ಬಸರಾಳು ಸಮೀಪದ ಹುರುಳಿಜವರನಕೊಪ್ಪಲು ಗ್ರಾಮದ ಶಶಿ ಎಂದು ತಿಳಿದುಬಂದಿದೆ. ಶಶಿ ಹಾಗೂ ಸಂಸಾರ ಬೆಂಗಳೂರಿನಲ್ಲಿ ವಾಸವಾಗಿದ್ದು, ಇಂದು ಬೆಂಗಳೂರಿನಿಂದ ಹುರುಳಿಜವರನಕೊಪ್ಪಲು ಗ್ರಾಮಕ್ಕೆ ಹೋಗಲು ರೈಲಿನಿಂದ ಮಂಡ್ಯಗೆ ಬಂದಿದ್ದಾರೆ. ಈ ವೇಳೆ ರೈಲ್ವೆ ಹಳಿಯನ್ನು ದಾಟುವಾಗ ಈ ಅವಘಡ ಜರುಗಿದೆ. ಇನ್ನೂ ಸಾವನ್ನಪ್ಪಿರುವ ವೃದ್ಧೆಯ ತಲೆ ನಜ್ಜುಗುಜ್ಜು ಆಗಿರುವ ಕಾರಣ ಆಕೆಯ ಗುರುತು ಇನ್ನೂ ಪತ್ತೆಯಾಗಿಲ್ಲ.