Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ದೆಹಲಿ ಅಬಕಾರಿ ನೀತಿ ‘ಹಗರಣ’: ಪಿಎಂಎಲ್ಎ ಅಡಿಯಲ್ಲಿ 76.54 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ ಇ.ಡಿ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ದೆಹಲಿ ಮತ್ತು ಮುಂಬೈನ ದುಬಾರಿ ಪ್ರದೇಶಗಳಲ್ಲಿ ನೆಲೆಗೊಂಡಿರುವ ಮನೆಗಳು, ರೆಸ್ಟೋರೆಂಟ್‌ಗಳು, 50 ವಾಹನಗಳು ಮತ್ತು ₹ 76.54 ಕೋಟಿ ಮೌಲ್ಯದ ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ತಿಳಿಸಿದೆ.

ಈ ಆಸ್ತಿಗಳು ಬಂಧಿತ ಆಮ್ ಆದ್ಮಿ ಪಕ್ಷದ (ಎಎಪಿ) ಸಂವಹನ ಉಸ್ತುವಾರಿ ವಿಜಯ್ ನಾಯರ್, ಮದ್ಯದ ಉದ್ಯಮಿ ಸಮೀರ್ ಮಹಂದ್ರು, ಅವರ ಪತ್ನಿ ಮತ್ತು ಕಂಪನಿ ಇಂಡೋಸ್ಪಿರಿಟ್ ಗ್ರೂಪ್, ಉದ್ಯಮಿ ದಿನೇಶ್ ಅರೋರಾ, ಅರುಣ್ ಪಿಳ್ಳೈ, ಮದ್ಯದ ಕಂಪನಿ ಬಡ್ಡಿ ರೀಟೇಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಮಿತ್ ಅರೋರಾ ಮತ್ತು ಇತರರಿಗೆ ಸೇರಿದ್ದು ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆಸ್ತಿಗಳ ತಾತ್ಕಾಲಿಕ ಜಪ್ತಿಗಾಗಿ ಆದೇಶವನ್ನು ನೀಡಲಾಗಿದೆ.
ಸಿಬಿಐ ದಾಖಲಿಸಿರುವ ಎಫ್ಐಆರ್ ಆಧಾರದ ಮೇಲೆ ಇ.ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಕೈಗೊಂಡಿದೆ. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಆರೋಪಿ ಎಂದು ಸಿಬಿಐ ಹೆಸರಿಸಿದೆ.

ತನ್ನ ಎಫ್‌ಐಆರ್‌ನಲ್ಲಿ, ಮನೀಷ್ ಸಿಸೋಡಿಯಾ ಮತ್ತು ಇತರ ಆರೋಪಿಗಳು ದೆಹಲಿ ಅಬಕಾರಿ ನೀತಿ 2021-22 ಕ್ಕೆ ಸಂಬಂಧಿಸಿದಂತೆ ಸಮರ್ಥ ಪ್ರಾಧಿಕಾರದ ಅನುಮೋದನೆಯಿಲ್ಲದೆ ಟೆಂಡರ್ ನಂತರ ಪರವಾನಗಿದಾರರಿಗೆ ಅನಗತ್ಯ ಅನುಕೂಲಗಳನ್ನು ಮಾಡುವ ಉದ್ದೇಶದಿಂದ ಶಿಫಾರಸು ಮಾಡಿದ್ದಾರೆ ಮತ್ತು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಹೊಸ ಅಬಕಾರಿ ನೀತಿ 2021–22 ಅನ್ನು ಕಳೆದ ವರ್ಷ ನವೆಂಬರ್‌ 17ರಂದು ಜಾರಿಗೊಳಿಸಲಾಗಿತ್ತು. ಅದರಂತೆ ನಗರದಾದ್ಯಂತ 32 ವಲಯಗಳಲ್ಲಿ 849 ಚಿಲ್ಲರೆ ಮಾರಾಟ ಪರವಾನಗಿ ನೀಡಲಾಗಿದೆ. ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ನಿಯಮ ಉಲ್ಲಂಘನೆ ಹಾಗೂ ಕಾರ್ಯವಿಧಾನದಲ್ಲಿನ ಲೋಪಗಳಿಗೆ ಸಂಬಂಧಿಸಿದಂತೆ ಸರ್ಕಾರದ ಅಬಕಾರಿ ನೀತಿ 2021–22 ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ್ದರು.

ಇ.ಡಿ ಈವರೆಗೆ ಈ ಪ್ರಕರಣದಲ್ಲಿ ಎರಡು ಚಾರ್ಜ್ ಶೀಟ್ ಸಲ್ಲಿಸಿದೆ ಮತ್ತು ಒಟ್ಟು ಆರು ಜನರನ್ನು ಬಂಧಿಸಿದೆ.

No Comments

Leave A Comment