Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಗೋಧ್ರೋತ್ತರ ಗಲಭೆ ಪ್ರಕರಣ: 22 ಆರೋಪಿಗಳ ಖುಲಾಸೆಗೊಳಿಸಿದ ಗುಜರಾತ್ ನ್ಯಾಯಾಲಯ

ವಡೋದರ: ಗುಜರಾತ್‌ನ ಪಂಚಮಹಲ್ ಜಿಲ್ಲೆಯ ದೆಲ್ವೋಲ್ ಗ್ರಾಮದಲ್ಲಿ ಗೋದ್ರಾ ಘಟನೆಯ ಬಳಿಕ ನಡೆದ ಹಿಂಸಾಚಾರದಲ್ಲಿ 17 ಮಂದಿ ಅಲ್ಪಸಂಖ್ಯಾತರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದ 22 ಆರೋಪಿಗಳನ್ನು ಹಲೋಲ್ ಹೆಚ್ಚುವರಿ ಸತ್ರ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.

2002ರ ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಕೋಮುಗಲಭೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ 17 ಮಂದಿ ಕೊಲೆ ಮಾಡಲಾಗಿತ್ತು. ಬಳಿಕ ಸಾಕ್ಷ್ಯವನ್ನು ನಾಶಪಡಿಸಲು ದೇಹಗಳನ್ನು ಸುಡಲಾಗಿತ್ತು.

ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಹಲೋಲ್ ಪಟ್ಟಣದ ನ್ಯಾಯಾಲಯವು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 22 ಆರೋಪಿಗಳನ್ನು ದೋಷ ಮುಕ್ತಗೊಳಿಸಿದೆ.

18 ವರ್ಷಗಳಿಂದ ವಿಚಾರಣಾಧೀನ ಕೈದಿಗಳಾಗಿದ್ದ 8 ಮಂದಿ ವಿಚಾರಣೆ ವೇಳೆ ಮೃತಪಟ್ಟಿದ್ದರು. ಮೃತಪಟ್ಟವರ ಎಲುಬುಗಳು ಸೇರಿದಂತೆ ಎಲ್ಲ ಪುರಾವೆಗಳನ್ನು ನ್ಯಾಯಾಲಯ ಪರಿಶೀಲನೆ ನಡೆಸಿದೆ. ಆದರೆ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಇಲ್ಲ” ಎಂದು ಆರೋಪಿಗಳ ಪರ ವಕೀಲ ಗೋಪಾಲ್‌ಸಿಂಗ್ ಸೋಲಂಕಿ ಹೇಳಿದ್ದಾರೆ. ಇದರ ಜತೆಗೆ ಸುಮಾರು 100 ಮಂದಿ ಸಾಕ್ಷಿಗಳನ್ನು ಪರಿಶೀಲನೆ ಮಾಡಲಾಗಿದ್ದು, ಇವರು ಕೂಡಾ ಮೂಲ ಹೇಳಿಕೆಯಿಂದ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ.

2002ರಲ್ಲಿ 59 ಮಂದಿಯ ಸಾವಿಗೆ ಕಾರಣವಾದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ಬಳಿಕ ಭಾರಿ ಪ್ರಮಾಣದ ಕೋಮುಗಲಭೆಗಳು ಸಂಭವಿಸಿದ್ದವು.

ಘಟನೆಯ ಮರುದಿನ ಅಂದರೆ ಮಾರ್ಚ್ 1ರಂದು ಗೋದ್ರಾದಿಂದ 30 ಕಿಲೋಮೀಟರ್ ದೂರದ ಕಲೋಲ್ ಪಟ್ಟಣದ ದೆಲ್ವೋನಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 17 ಮಂದಿ ಜೀವಂತ ದಹನವಾಗಿದ್ದರು.

ಘಟನೆಯಲ್ಲಿ ಸಂತ್ರಸ್ತರು ಮತ್ತು ಪ್ರತ್ಯಕ್ಷ ಸಾಕ್ಷಿಗಳು ಮನವಿ ಸಲ್ಲಿಸಿದರೂ ಪೊಲೀಸ್ ಅಧಿಕಾರಿಯೊಬ್ಬರು ಎಫ್‌ಐಆರ್ ದಾಖಲಿಸಿಲ್ಲ ಎಂಬ ಆರೋಪವೂ ಸೇರಿದಂತೆ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆದಿತ್ತು.

2003ರ ಡಿಸೆಂಬರ್‌ನಲ್ಲಿ ಅಂದರೆ ಘಟನೆ ನಡೆದ 20 ತಿಂಗಳ ಬಳಿಕ ಮರು ವಿಚಾರಣೆಗೆ ಆದೇಶಿಸಲಾಗಿತ್ತು. ತಲೆ ಮರೆಸಿಕೊಂಡಿದ್ದ ಎಲ್ಲ ಆರೋಪಿಗಳನ್ನು 2004ರಲ್ಲಿ ಬಂಧಿಸಲಾಗಿದ್ದು, ಅವರ ಜಾಮೀನು ಅರ್ಜಿಗಳನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು. 2004ರಲ್ಲಿ ಅವರಿಗೆ ಗುಜರಾತ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು ಎಂದು ಸೋಲಂಕಿ ವಿವರಿಸಿದ್ದಾರೆ.

No Comments

Leave A Comment