Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ನ್ಯೂ ಇಯರ್ ವೇಳೆ ಮಾರಾಟಕ್ಕೆ ಶೇಖರಿಸಿದ್ದ 6.31 ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಬೆಂಗಳೂರು ನಗರದಲ್ಲಿ ಮಾರಾಟ ಮಾಡಲು ತಯಾರಿ ನಡೆಸಿದ್ದ ಐವರಿಕೋಸ್ಟ್’ನ ಓರ್ವ ಸೇರಿ 8 ಮಂದಿ ಕುಖ್ಯಾತ ಡ್ರಗ್’ಪೆಡ್ಲರ್’ಗಳನ್ನು ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು 6.31 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಐವರಿಕೋಸ್ಟ್’ನ ಆಗ್ಬು ಚಿಕ್ಕೆ ಆಂಟೋನಿ, ರಾಮಣ್ಣ, ಇರ್ಫಾನ್, ಬಾಷಾ, ಮುಹಮ್ಮದ್ ಮುಜಾಹಿದ್, ಇಲ್ಯಾಸ್ ಸೇರಿ 8 ಮಂದಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.

ಬಂಧಿತ ಆರೋಪಿಗಳಿಂದ 6.31 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳಾದ 2 ಕೆಜಿ 550 ಗ್ರಾಂ ಎಂಡಿಎಂಎ, 350 ಎಕ್ಸ್ ಟೆನ್ಸಿ ಪಿಲ್ಸ್ ಗಳು,4 ಕೆಜಿ ಆಶಿಷ್ ಆಯಿಲ್ 440 ಗ್ರಾಂ ಚರಸ್, 7 ಕೆಜಿ 100 ಗ್ರಾಂ ಗಾಂಜಾ ಕೃತ್ಯಕ್ಕೆ ಬಳಸುತ್ತಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಡ್ರಗ್ ಸೇವನೆ/ಸರಬರಾಜು ಹಾಗೂ ಮಾರಾಟದಲ್ಲಿ ತೊಡಗುವ ಪೆಡ್ಲರ್’ಗಳ ಮೇಲೆ ಹೆಚ್ಚಿನ ‌ನಿಗಾ ಇಟ್ಟು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ನೇಮಕ ಮಾಡಿದ್ದರು.

ಈ ತಂಡವು ಒಂದು ತಿಂಗಳಿನಿಂದ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ನಗರದ ವಿವಿಧ ಭಾಗಗಳಲ್ಲಿ ಹೊಸವರ್ಷದ ಸಂಭ್ರಮದ ವೇಳೆ ಡ್ರಗ್ಸ್ ಮಾರಾಟ ಮಾಡಲು ಸಜ್ಜಾಗಿದ್ದ ಆರೋಪಿಗಳನ್ನು ಕೊತ್ತನೂರು, ಬಾಣಸವಾಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದರು.

ಬಂಧಿತರಲ್ಲಿ 1 ಐವರಿಕೋಸ್ಟ್, 1 ಕೋಸ್ಟರಿಕ ದೇಶದ ನಾಗರೀಕರು, 6 ಮಂದಿ ಅಂತರರಾಜ್ಯ ಡ್ರಗ್ಸ್ ಪೆಡ್ಲರ್’ಗಳು ಸೇರಿದ್ದಾರೆ ಎಂದು ತಿಳಿಸಿದರು.

ಆರೋಪಿಗಳು ಡ್ರಗ್ ಪೆಡ್ಲಿಂಗ್ ಮಾಡಿ ಅಕ್ರಮ ಹಣ ಗಳಿಸುವ ಉದ್ದೇಶದಿಂದ ಗೋವಾ, ದೆಹಲಿ, ಆಂಧ್ರಪ್ರದೇಶ, ಹೈದರಾಬಾದ್ ಹಾಗೂ ನಗರದಲ್ಲಿನ ನೈಜೀರಿಯಾ ಡ್ರಗ್’ಪೆಡ್ಲರ್’ಗಳಿಂದ ಡ್ರಗ್ಸ್ ಖರೀದಿಸಿ ಬಾಡಿಗೆ ಮನೆಯನ್ನು ಪಡೆದು ಶೇಖರಣೆ ಮಾಡಿಟ್ಟುಕೊಂಡು ಹೊಸ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು ಎಂದು ತಿಳಿಸಿದರು.

ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಹಾಗೂ ಹಣಕಾಸಿನ ಮೂಲ, ಡ್ರಗ್ಸ್ ಸರಬರಾಜಿನ ಮೂಲ ಮುಂತಾದವುಗಳ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್,ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರಿದ್ದರು.

No Comments

Leave A Comment