ಬೃಹತ್ ಪ್ರಮಾಣದಲ್ಲಿ ಸಾಗಿಸುತ್ತಿದ್ದ ಗಾಂಜಾ ಪತ್ತೆ : ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಮಹೇಂದ್ರ ಎಕ್ಸ್ ಯುವಿ 500 ಕಾರಿನಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಂಗಳೂರು ನಗರಕ್ಕೆ, ಬೆಂಗಳೂರಿಗೆ ಮತ್ತು ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಸಾಗಿಸುತ್ತಿದ್ದ 132 ಕಿಲೋ ಗ್ರಾಮ್ ಗಾಂಜಾವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡು ಇಬ್ಭರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಬಂಟ್ವಾಳ ತಾಲೂಕು ನರಿಂಗಾನದ ತೌಡುಗೋಳಿ ಕ್ರಾಸ್ ನಿವಾಸಿ ರಮೀಝ್ ರಾಝ್ ಮತ್ತು ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರದ ಮೀಯಪದವು ಮದಂಗಲ್ ಕಟ್ಟೆಯ ನಿವಾಸಿ ಅಬ್ಬುಲ್ ಕಾದರ್ ಹ್ಯಾರಿಸ್ ಎಂದು ತಿಳಿದುಬಂದಿದೆ.
ಮಹೇಂದ್ರ ಕಾರಿನಲ್ಲಿ ನಿನ್ನೆ ಮಂಗಳೂರು ನಗರಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಬಿ ನೇತೃತ್ವದ ಪೊಲೀಸ್ ತಂಡ ಮುಡಿಪು ಕುರ್ನಾಡು ಗ್ರಾಮದ ಕಾಯರ್ ಗೋಳಿ ಎಂಬಲ್ಲಿ ಪತ್ತೆ ಹಚ್ಚಿ ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಅದರಲ್ಲಿ 132 ಕಿಲೋ ಗ್ರಾಮ್ ಗಾಂಜಾ ಪತ್ತೆಯಾಗಿದೆ.