ಅಕ್ಟೋಬರ್ 22 ರಂದು 10 ಲಕ್ಷ ಸಿಬ್ಬಂದಿ ನೇಮಕಾತಿ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 22 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ 10 ಲಕ್ಷ ಸಿಬ್ಬಂದಿ ನೇಮಕಾತಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಇದೇ ವೇಳೆ ರೋಜ್‌ಗಾರ್ ಮೇಳದಲ್ಲಿ ಉದ್ದೋಗಕ್ಕೆ ಆಯ್ಕೆಯಾದ 75,000 ಮಂದಿಗೆ ಪ್ರಧಾನಿ ಮೋದಿ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ನೇಮಕಗೊಂಡವರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
38 ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ 75 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು, ನೇಮಕಗೊಂಡವರು ಗ್ರೂಪ್-ಎ, ಗ್ರೂಪ್-ಬಿ (ಗೆಜೆಟೆಡ್), ಗ್ರೂಪ್-ಬಿ (ನಾನ್ ಗೆಜೆಟೆಡ್) ಮತ್ತು ಗ್ರೂಪ್-ಸಿ ನಂತಹ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಈ ನೇಮಕಾತಿಗಳನ್ನು ಸ್ವತಃ ಸಚಿವಾಲಯಗಳು ಮತ್ತು ಇಲಾಖೆಗಳು ಅಥವಾ ಯುಪಿಎಸ್ ಸಿ, ಎಸ್ಎಸ್ ಸಿ ಮತ್ತು ರೈಲ್ವೇ ನೇಮಕಾತಿ ಮಂಡಳಿಯಂತಹ ನೇಮಕಾತಿ ಏಜೆನ್ಸಿಗಳ ಮೂಲಕ ಮಿಷನ್ ಮೋಡ್‌ನಲ್ಲಿ ಆಯ್ಕೆ ಮಾಡಲಾಗುತ್ತಿದೆ.