Log In
BREAKING NEWS >
ನವೆ೦ಬರ್ 27ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸಮುದಾಯ ಭವನವನ್ನು ವಶಕ್ಕೆ ಪಡೆದ ಎನ್‌ಐಎ

ದಕ್ಷಿಣ ಕನ್ನಡ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೇಟೆ ಸಮೀಪದ ಇಡುಕ್ಕಿ ಗ್ರಾಮದ ಸಮುದಾಯ ಭವನವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಶಕ್ಕೆ ತೆಗೆದುಕೊಂಡಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಮೂಲಗಳ ಪ್ರಕಾರ, ಇಡುಕ್ಕಿ ಗ್ರಾಮದ ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲ್ ಅನ್ನು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸಲಾಗುತ್ತಿತ್ತು. ಹೀಗಾಗಿ, ತನಿಖಾ ಸಂಸ್ಥೆಯು 20 ಗುಂಟೆಗಳ ಸಂಪೂರ್ಣ ಆವರಣವನ್ನು ವಶಕ್ಕೆ ತೆಗೆದುಕೊಂಡಿದೆ.

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ (ಪಿಎಫ್‌ಐ) ಸೇರ್ಪಡೆಗೊಂಡ ಕಾರ್ಯಕರ್ತರು ದೇಶ ವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಇಲ್ಲಿ ತರಬೇತಿ ಪಡೆಯುತ್ತಿದ್ದರು. ಅಲ್ಲದೆ, ಇಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಸೇಡಿನ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಸಮುದಾಯ ಭವನದ ಮಾಲೀಕರಿಗೂ ಅಧಿಕೃತ ಮಾಹಿತಿ ನೀಡಲಾಗಿದ್ದು, ಸಮುದಾಯ ಭವನವನ್ನು ಬಾಡಿಗೆಗೆ ನೀಡುವಂತಿಲ್ಲ ಅಥವಾ ಬೇರೆಯವರಿಗೆ ನೀಡುವಂತಿಲ್ಲ ಎಂದು ತಿಳಿಸಿದ್ದಾರೆ.

ಸಮುದಾಯ ಭವನದಲ್ಲಿ ಓಡಾಟ ಅಥವಾ ಸಭಾಂಗಣದಲ್ಲಿ ಯಾವುದೇ ಕೆಲಸಗಳನ್ನು ನಡೆಸುವುದನ್ನು ಎನ್ಐಎ ನಿಷೇಧಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. 14 ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರು ಮಂದಿಗಾಗಿ ಶೋಧ ನಡೆಸಿದ್ದಾರೆ.

240 ಸಾಕ್ಷಿಗಳ ಹೇಳಿಕೆ ಸೇರಿದಂತೆ 1,500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಶಫಿ ಬೆಳ್ಳಾರೆಗೆ ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಟಿಕೆಟ್ ಘೋಷಿಸಿದೆ. ಈ ಬೆಳವಣಿಗೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಶಫಿ ಬೆಳ್ಳಾರೆ ಸದ್ಯ ಜೈಲಿನಲ್ಲಿದ್ದಾರೆ. ಬೆಳ್ಳಾರೆ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿ ಕಸ್ಟಡಿಯಲ್ಲಿ ಇರಿಸಿತ್ತು.

No Comments

Leave A Comment