ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ವಿದಾಯ
ಸಿಡ್ನಿ: ಆಸ್ಟ್ರೇಲಿಯದ ಟಿ-20 ತಂಡದ ಆ್ಯರೋನ್ ಫಿಂಚ್ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ.
ಆಸ್ಟ್ರೇಲಿಯಾ ಪರವಾಗಿ ದಾಖಲೆಯ 76 ಟಿ20 ಮತ್ತು 55 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಫಿಂಚ್ ಕ್ರಿಕೆಟ್ ವೃತ್ತಿ ಬದುಕಿನಿಂದ ಹಿಂದೆ ಸರಿದಿದ್ದಾರೆ.
“ನಾನು 2024 ರ ಮುಂದಿನ ಟಿ20 ವಿಶ್ವಕಪ್‌ನವರೆಗೆ ಆಡುವುದಿಲ್ಲ ಎಂದು ಅರಿತುಕೊಂಡಿದ್ದೇನೆ. ಹೀಗಾಗಿ ಕ್ರಿಕೆಟ್ನಿಂದ ದೂರ ಸರಿಯಲು ಇದೇ ಉತ್ತಮ ಸಮಯವಾಗಿದೆ. ತಂಡಕ್ಕೆ ಹೊಸ ನಾಯಕ, ಆಟಗಾರನ ಆಯ್ಕೆಗೂ ಇದು ಸಕಾಲವಾಗಿದೆ. ಅಂತಾರಾಷ್ಟ್ರೀಯ ವೃತ್ತಿ ಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಫಿಂಚ್ ಹೇಳಿದ್ದಾರೆ.
ಜನವರಿ 2011 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಫಿಂಚ್ 17 ಏಕದಿನ ಶತಕಗಳು ಮತ್ತು ಎರಡು ಟಿ20 ಶತಕಗಳನ್ನು ಒಳಗೊಂಡಂತೆ 8,804 ರನ್ ಗಳಿಸಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಫಿಂಚ್ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿ, ಟಿ20 ಯಲ್ಲಿ ತಂಡದ ನಾಯಕತ್ವವನ್ನು ಮುಂದುವರೆಸಿದ್ದರು.
2020 ರಲ್ಲಿ ಫಿಂಚ್ ಐಸಿಸಿ ಪುರುಷರ ಟಿ20 ದಶಕದ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. 2021 ರಲ್ಲಿ ಫಿಂಚ್ ನಾಯಕತ್ವದಲ್ಲಿ ತಂಡ ಟಿ20 ವಿಶ್ವಕಪ್ ಗೆಲುವು ಸಾಧಿಸಿತ್ತು. 2015 ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲೂ ಇದ್ದರು. 12 ವರ್ಷಗಳ ವೃತ್ತಿ ಬದುಕಿಗೆ ಕ್ರಿಕೆಟಿಗ ತೆರೆ ಎಳೆದಿದ್ದಾರೆ.
ಬ್ಯಾಟಿಂಗ್ ವೈಫಲ್ಯದಿಂದಾಗಿ ಆಸ್ಟ್ರೇಲಿಯಾದ ಸೀಮಿತ ಓವರ್ಗಳ ನಾಯಕ ಆ್ಯರೋನ್ ಪಿಂಚ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕದಿನ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದರು.