Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಕಲುಷಿತ ಆಹಾರ ಸೇವನೆ: ಆಸ್ಪತ್ರೆಗೆ ದಾಖಲಾದ ಮಂಗಳೂರು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ 173ಕ್ಕೆ ಏರಿಕೆ

ಮಂಗಳೂರು: ಕಲುಷಿತ ಆಹಾರ ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾದ ಮಂಗಳೂರು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ 173ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಪ್ರಭಾರ) ಡಾ. ರಾಜೇಶ್ ಅವರು ಮಾಹಿತಿ ನೀಡಿದ್ದು, ಕಲುಷಿತ ಆಹಾರ ಸೇವನೆಯಿಂದ ನಗರದ ನರ್ಸಿಂಗ್ ಕಾಲೇಜೊಂದರ 173 ಮಂದಿ ವಿದ್ಯಾರ್ಥಿನಿಯರು ಸೋಮವಾರ ಅಸ್ವಸ್ಥಗೊಂಡಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ.

ಅಂತೆಯೇ ವಿದ್ಯಾರ್ಥಿನಿಯರು ಸೇವಿಸಿದ್ದ ಆಹಾರ ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗಾಗಿ ಮೈಸೂರಿನ ಆಹಾರ ಸುರಕ್ಷತಾ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಾಸ್ಟೆಲ್‌ನ ನೀರಿನ ಮಾದರಿಗಳನ್ನು ಕೂಡ ಸಂಗ್ರಹಿಸಲಾಗಿತ್ತು, ಅದರ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆಹಾರ ಕಲುಷಿತಗೊಳ್ಳಲು ಕಾರಣ ಏನೆಂಬುದು ಪರೀಕ್ಷೆಯ ವರದಿ ಕೈಸೇರಿದ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಏನಿದು ಘಟನೆ?
ಮಂಗಳೂರು ನಗರದ ಶಕ್ತಿನಗರದಲ್ಲಿ ಹಾಸ್ಟೆಲ್‌ನಲ್ಲಿ ವಾಸವಿದ್ದ ಸಿಟಿ ಕಾಲೇಜ್ ಆಫ್‌ ನರ್ಸಿಂಗ್ ಸಂಸ್ಥೆಯ ವಿದ್ಯಾರ್ಥಿನಿಯರು ಸೋಮವಾರ ಆಹಾರ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದರು. ಹಾಸ್ಟೆಲ್‌ನ ಬಹುತೇಕ ವಿದ್ಯಾರ್ಥಿಗಳಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಹೊಟ್ಟೆ ನೋವು ವಾಂತಿ ಭೇದಿ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗಿತ್ತು. ಅವರನ್ನು ನಗರದ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು. ಅನೇಕ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆದು ಹಾಸ್ಟೆಲ್‌ಗೆ ಮರಳಿದ್ದಾರೆ. ಈಗಲೂ ಕೆಲ ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ಇದ್ದಾರೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಸಂಜೆ ಅಥವಾ ನಾಳೆ ಬಹುತೇಕ ಎಲ್ಲ ವಿದ್ಯಾರ್ಥಿನಿಯರೂ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಡಾ.ರಾಜೇಶ್ ತಿಳಿಸಿದ್ದಾರೆ.

No Comments

Leave A Comment