ಮಲ್ಪೆ: ಸಂವಿಧಾನ ಎಂದರೆ ಮೀಸಲಾತಿ ಮತ್ತು ದಲಿತರ ವಿಶೇಷ ಸೌಲಭ್ಯಗಳು ಅಂತ ಬಹುತೇಕ ಜನರು ತಿಳಿದುಕೊಂಡಿದ್ದಾರೆ ಇದು ತಪ್ಪು ಕಲ್ಪನೆ.ಸಂವಿಧಾನದಲ್ಲಿ ಸಾಮಾಜಿಕ,ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲಾರಿಗೂ ಸೌಲಭ್ಯಗಳು ನೀಡಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ನೇ ಗಣರಾಜ್ಯೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸಂವಿಧಾನ ದಲಿತ,ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಘನತೆಯನ್ನು ತಂದು ಕೊಟ್ಟಿದ್ದು, ನಮ್ಮ ಸಂವಿಧಾನ ಉಳಿದರೆ ನಮ್ಮ ದೇಶದ ಸಮಗ್ರತೆ,ಸಂಸ್ಕೃತಿ ಮತ್ತು ಜನರ ಬದುಕು ಉಳಿಯುತ್ತದೆ.ನಾವು ಭಾರತೀಯರು ಎನ್ನುವ ಒಗ್ಗಟ್ಟಿನ ಆಶಯಕ್ಕೆ ಅಡ್ಡಗಾಲಾಗಿ ನಿಂತಿರುವ ಜಾತಿ,ಧರ್ಮ,ಮೌಢ್ಯ ಕಿತ್ತು ಮನುಷ್ಯತ್ವವನ್ನು ಪ್ರೀತಿಸಬೇಕು ಎಂದರು.
ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ ಸಂವಿಧಾನ ರಚನೆ ಕರಡು ಸಮಿತಿಯಲ್ಲಿ ಒಟ್ಟು ಏಳು ಜನ ಇರುತ್ತಾರೆ.ಈ ಏಳು ಜನರಲ್ಲಿ ಇಬ್ಬರು ಅಕಾಲಿಕವಾಗಿ ಮರಣ ಹೊಂದುತ್ತಾರೆ.ಇನ್ನೊಬ್ಬರು ರಾಜೀನಾಮೆ ನೀಡುತ್ತಾರೆ.ಒಬ್ಬರು ಅಮೇರಿಕದಲ್ಲಿ ನೆಲೆಸುತ್ತಾರೆ.ಒಬ್ಬರು ಅನಾರೋಗ್ಯದಿಂದ ಬಳಲುತ್ತಾರೆ.ಇಬ್ಬರು ದೆಹಲಿಯ ರಾಜಕೀಯದಲ್ಲಿ ತೊಡಗಿಸಿಕೊಂಡು ಇರುತ್ತಾರೆ.ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಒಬ್ಬರೇ ನಮ್ಮ ಭಾರತದ ಸಂವಿಧಾನವನ್ನು ಬರೆದಿದ್ದಾರೆ ಎಂದರು.