Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಮೆಟ್ರೋ ಪಿಲ್ಲರ್ ದುರಂತ, ಸಾಲು ಸಾಲು ಪ್ರತಿಭಟನೆ: ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ, ಜನ ಹೈರಾಣ

ಬೆಂಗಳೂರು: ಮೆಟ್ರೋ ಪಿಲ್ಲರ್ ದುರಂತ ಹಾಗೂ ನಗರದಲ್ಲಿ ನಡೆದ ಸಾಲು ಸಾಲು ಪ್ರತಿಭಟನೆಯಿಂದಾಗಿ ನಗರದ ಹಲವೆಡೆ ವಿಪರೀತ ಸಂಚಾರ ದಟ್ಟಣೆ ಎದುರಾಗಿ ವಾಹನ ಸವಾರರು ಕಂಗಾಲಾದ ಬೆಳವಣಿಗೆ ಮಂಗಳವಾರ ಕಂಡು ಬಂದಿತು.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಪರವಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಹಾಗೂ ವಿರುದ್ಧವಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತೃತ್ವದಲ್ಲಿ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮೆರವಣಿಗೆ ಸಾಗುತ್ತಿದ್ದ ಮೇಲ್ಸೇತುವೆ ಹಾಗೂ ಶೇಷಾದ್ರಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಹೀಗಾಗಿ, ಮೆರವಣಿಗೆ ಸಾಗುತ್ತಿದ್ದ ಅವಧಿಯಲ್ಲಿ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳು ನಿಂತಲೇ ನಿಲ್ಲಬೇಕಾಯಿತು.

ಮೆಜೆಸ್ಟಿಕ್, ಗಾಂಧಿನಗರ, ಮೈಸೂರು ಬ್ಯಾಂಕ್ ವೃತ್ತ, ಬಸವೇಶ್ವರ ವೃತ್ತ, ಸ್ಯಾಂಕಿ ರಸ್ತೆ, ಶಿವಾನಂದ ವೃತ್ತ, ಆನಂದರಾವ್ ವೃತ್ತ, ಓಕಳಿಪುರ, ಶೇಷಾದ್ರಿಪುರ, ಮಲ್ಲೇಶ್ವರ, ರೇಸ್‌ಕೋರ್ಸ್ ರಸ್ತೆ, ಅರಮನೆ ರಸ್ತೆ, ಕೆ.ಆರ್. ವೃತ್ತ, ಕೆಂಪೇಗೌಡ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಭಾರೀ ಸಂಚಾರ ದಟ್ಟಣೆ ಕಂಡು ಬಂದಿತು.

ಎಚ್‌ಬಿಆರ್ ಲೇಔಟ್ ಮತ್ತು ಔಟರ್ ರಿಂಗ್ ರೋಡ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿಗಳ ಮೇಲೆ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿದುಬಿದ್ದು ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ್ದರೂ, ಈ ಘಟನೆ ಕೂಡ ಸಂಚಾರ ಅಸ್ತವ್ಯಸ್ತವಾಗುವಂತೆ ಮಾಡಿತ್ತು. ಮೆಟ್ರೋ ಪಿಲ್ಲರ್ ದುರಂತ ಬಳಿಕ ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ಪ್ರತಿಭಟನೆ ನಡೆಸಿದರು.

ಮ್ಯಾನೇಜ್‌ಮೆಂಟ್ ವೃತ್ತಿಪರರಾದ ಶ್ರುತಿ ಸೋಮಯ್ಯ ಎಂಬುವವರು ಮಾತನಾಡಿ, ಮೆಜೆಸ್ಟಿಕ್ ಬಳಿ ನಡೆದ ಪ್ರತಿಭಟನೆಯಿಂದಾಗಿ ನನ್ನ ಪ್ರಯಾಣದ ಸಮಯ 1.5 ಗಂಟೆ ತೆಗೆದುಕೊಂಡಿತು. ಬೆಂಗಳೂರು ಗಾಲ್ಫ್ ಕ್ಲಬ್‌ನಿಂದ ರೈಲ್ವೇ ನಿಲ್ದಾಣದವರೆಗೆ ಹೋಗಲು 1.5 ಗಂಟೆ ಸಮಯ ಬೇಕಾಯಿತು. ಪೀಕ್ ಅವರ್‌ನಲ್ಲಿ ಯಾವ ಅಧಿಕಾರಿಗಳು ಪ್ರತಿಭಟನೆಗೆ ಅನುಮತಿ ನೀಡಿದರು ಎಂದು ಪ್ರಶ್ನಿಸಿದ್ದಾರೆ.

ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ಮಾತನಾಡಿ, ನಗರದ ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು 450 ಟ್ರಾಫಿಕ್ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

No Comments

Leave A Comment