ಕುಂದಾಪುರ: ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ – ವಕೀಲರಿಂದ ಪ್ರತಿಭಟನೆ
ಕುಂದಾಪುರ:ಡಿ 16 : ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಕುಂದಾಪುರ ತಾಲೂಕು ವಕೀಲರ ಸಂಘದ ವತಿಯಿಂದ ಕುಂದಾಪುರ ಉಪವಿಭಾಗಾಧಿಕಾರಿಯವರ ಕಚೇರಿ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.
ಬಳಿಕ ಅಸಿಸ್ಟೆಂಟ್ ಕಮಿಷನ್‌ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜ್ಯಾರಿಗೊಳಿಸವಂತೆ ಆಗ್ರಹಿಸಿದರು.
ಬಳಿಕ ಮಾತನಾಡಿದ ವಕೀಲ ಟಿ. ಬಾಲಚಂದ್ರ ಶೆಟ್ಟಿ, ವಕೀಲರು ದಿನನಿತ್ಯ ಕಕ್ಷಿಗಾರರು, ಸಾರ್ವಜನಿಕರು ಮತ್ತು ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳ, ಪ್ರಾಧಿಕಾರದ ಜೊತೆಯಲ್ಲಿ ಕೆಲಸ ಮಾಡಬೇಕಾಗಿದೆ. ಆದರೆ ಕೆಲವು ವರ್ಷಗಳಿಂದ ದೇಶದ ಇತರ ರಾಜ್ಯಗಳಲ್ಲಿ ಮತ್ತು ಕರ್ನಾಟಕದಲ್ಲಿ ವಕೀಲರ ಮೇಲೆ ಪೊಲೀಸರು ಹಾಗೂ ಸಾರ್ವಜನಿಕರಲ್ಲಿ ಕೆಲವು ಗೂಂಡಾ ಪ್ರವೃತ್ತಿಯ ವ್ಯಕ್ತಿಗಳು ಅಲ್ಲದೇ ತಮ್ಮ ಪ್ರಕರಣದಲ್ಲಿ ನ್ಯಾಯಾಲಯದಿಂದ ಪ್ರತಿಕೂಲ ಆದೇಶ ಅಥವಾ ತೀರ್ಪು ಬಂದಾಗ ಕಕ್ಷಿಗಾರರು ಕೂಡ ವಕೀಲರ ಮೇಲೆ ಹಲ್ಲೆ ನಡೆಸಿದ ಮತ್ತು ಕೊಲೆ ಕೂಡ ನಡೆಸಿದ ಪ್ರಕರಣಗಳು ನಡೆಯುತ್ತಿವೆ. ಇತ್ತೀಚೆಗೆ ಸಾರ್ವಜನಿಕವಾಗಿ ವಕೀಲರೊಬ್ಬರನ್ನು ಪ್ರಕರಣದ ಎದುರು ಕಕ್ಷಿದಾರರು ಹಲ್ಲೆ ನಡೆಸಿದ್ದು ಮತ್ತು ಕೆಲವು ದಿನಗಳ ಹಿಂದೆ ಪೊಲೀಸ್ ಅಧಿಕಾರಿ ಒಬ್ಬರು ಮಂಗಳೂರಿನ ಯುವ ವಕೀಲರೊಬ್ಬರನ್ನು ರಾತ್ರೋರಾತ್ರಿ ಬರೀ ಮೈಯಲ್ಲಿ ಎಳೆದುಕೊಂಡು ಹೋಗಿ ಹಿಂಸೆ ನೀಡಿದ ಪ್ರಕರಣ ನಡೆದಿದೆ. ಆದುದರಿಂದ ರಾಜ್ಯ ಸರ್ಕಾರ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜ್ಯಾರಿಗೊಳಿಸಬೇಕು ಎಂದು ಆಗ್ರಹಿಸಿದರು. ತಾಲೂಕಿನ ಎಲ್ಲಾ ವಕೀಲರು ಭಾಗವಹಿಸಿದ್ದರು.