ಮುರುಘಾಶ್ರೀ ಮಾಡಿರುವುದು ಅಕ್ಷಮ್ಯ ಅಪರಾಧ, ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ: ಬಿ.ಎಸ್. ಯಡಿಯೂರಪ್ಪ
ಉಡುಪಿ: ಮುರುಘಾ ಶರಣರು ಕ್ಷಮಿಸಲಾರದ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎಲ್ಲರೂ ಖಂಡಿಸಬೇಕು. ಶ್ರೀ ಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಹೇಳಿದ್ದಾರೆ.
ಮುರುಘಾ ಶರಣರಿಂದ ಲೈಂಗಿಕ ಕಿರುಕುಳ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ ಅವರು, ಮುರುಘಾ ಶರಣರು ಕ್ಷಮಿಸಲಾರದ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆಂದು ಅಂದುಕೊಂಡಿರಲಿಲ್ಲ. ಎಲ್ಲರೂ ಇದನ್ನು ಖಂಡಿಸಬೇಕು. ಶ್ರೀ ಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಯಾವುದೊ ಭ್ರಮೆಯಲ್ಲಿದ್ದಾರೆ. ರಾಜ್ಯದ ಜನ ಅವರ ಜೇಬಿನಲ್ಲಿದ್ದಾರೆ ಎಂಬ ಭಾವನೆ ಅವರ ಮನಸ್ಸಲ್ಲಿದ್ದಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವುದು ಅಸಾಧ್ಯ. ನಾನು ಮತ್ತು ಬೊಮ್ಮಾಯಿ ರಾಜ್ಯದಲ್ಲಿ ಪ್ರವಾಸ ಹೊರಟಾಗ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ. ಮೋದಿ ಅವರ ಬೆಂಬಲದೊಂದಿಗೆ ಬಿಜೆಪಿಗೆ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಸಿಗಲಿದೆ. ಕರ್ನಾಟಕದಲ್ಲಿ ಬಿಜೆಪಿಯ ಗೆಲುವನ್ನು ತಡೆಯಲು ಸಿದ್ದರಾಮಯ್ಯನಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಅವರು ಬಾದಾಮಿಯನ್ನು ಏಕೆ ಬಿಟ್ಟು ಬಂದಿದ್ದಾರೆ. ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಸೋಲು ನಿಶ್ಚಿತ. ಎಂಎಲ್ಎ ಆಗಿ ಕೆಲವೇ ಮತಗಳಿಂದ ಅಂದು ಗೆದ್ದಿದ್ದಾರೆ. ಆನಂತರ ಕ್ಷೇತ್ರವನ್ನು ಮರೆತುಬಿಟ್ಟಿದ್ದಾರೆ. ಅಭಿವೃದ್ಧಿ ಮಾಡಿಲ್ಲ. ಬಾದಾಮಿಯನ್ನು ತೊರೆಯುತ್ತೇನೆ ಎಂದು ಹೇಳುವುದು ನಿಮಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ. ರಾಜ್ಯದ ಜನ ಈಗಾಗಲೇ ತೀರ್ಮಾನವನ್ನು ಮಾಡಿದ್ದಾರೆ ನಿಮಗೆ ಉತ್ತರ ಕೊಡುತ್ತಾರೆ ಎಂದಿದ್ದಾರೆ.