ನಾನು ಏಕ್ತಾ ನಗರದಲ್ಲಿದ್ದರೂ ನನ್ನ ಮನಸ್ಸು ಮೋರ್ಬಿ ಸಂತ್ರಸ್ತರ ಜೊತೆಗಿದೆ: ಪ್ರಧಾನಿ ಮೋದಿ
ನರ್ಮದಾ: ನಾನು ಏಕ್ತಾ ನಗರದಲ್ಲಿದ್ದರೂ ನನ್ನ ಮನಸ್ಸು ಮೋರ್ಬಿ ಸಂತ್ರಸ್ತರ ಜೊತೆಗಿದೆ ಎಂದು ಗುಜರಾತ್ ಸೇತುವೆ ದುರಂತ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.
ಗುಜರಾತ್ ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ಗುಜರಾತ್‌ನ ಮೊರ್ಬಿ ನಗರದ ಸೇತುವೆ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದರು.
“ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಾನು ಸಂತಾಪವನ್ನು ಸೂಚಿಸುತ್ತೇನೆ. ಈ ದುಃಖದ ಸಮಯದಲ್ಲಿ ಸರ್ಕಾರವು ಎಲ್ಲಾ ರೀತಿಯಲ್ಲೂ ದುಃಖಿತ ಕುಟುಂಬಗಳೊಂದಿಗೆ ಇದೆ. ಗುಜರಾತ್ ಸರ್ಕಾರ ನಿನ್ನೆಯಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಕೇಂದ್ರವು ರಾಜ್ಯ ಸರ್ಕಾರಕ್ಕೆ ಎಲ್ಲ ಸಹಾಯವನ್ನೂ ನೀಡುತ್ತಿದೆ ಎಂದು ತಿಳಿಸಿದರು.
“ನಾನೀಗ ಏಕ್ತಾ ನಗರದಲ್ಲಿ ಇದ್ದೇನೆ. ಆದರೆ, ನನ್ನ ಮನಸ್ಸು ಮೋರ್ಬಿ ಸಂತ್ರಸ್ತರ ಜೊತೆಗಿದೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ದೊಡ್ಡ ನೋವನ್ನು ಅನುಭವಿಸುತ್ತಿದ್ದೇನೆ. ಒಂದು ಕಡೆ ನೋವು, ಇನ್ನೊಂದು ಕಡೆ ಕರ್ತವ್ಯವಿದೆ. ಎರಡನ್ನು ನಿಭಾಯಿಸಬೇಕಿದೆ. ಕಳೆದ ರಾತ್ರಿಯೇ ಮೋರ್ಬಿಗೆ ಗುಜರಾತ್ ರಾಜ್ಯ ಮುಖ್ಯಮಂತ್ರಿಗಳು ಭೇಟಿ ನೀಡಿದ್ದು, ಶೋಧ ಕಾರ್ಯ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತನಿಖೆಗಾಗಿ ಎರಡು ಸಮಿತಿಗಳ ರಚಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂಬ ಭರವಸೆಯನ್ನು ಜನರಿಗೆ ಭರವಸೆ ನೀಡುತ್ತೇನೆಂದು ಹೇಳಿದರು.
ಭಾರತದ ಏಕತೆಯನ್ನು ಒಡೆಯಲು ಶತ್ರುಗಳು ಯತ್ನಿಸುತ್ತಿದ್ದಾರೆ:
ಭಾರತ ಅನನ್ಯತೆಯಿಂದ ಕೂಡಿದ್ದು, ಎಂದಿಗೂ ಅದಕ್ಕೆ ಏಕತೆಯ ಅಗತ್ಯ ಬಂದಿಲ್ಲ. ನಮ್ಮ ದೇಶದ ಈ ಐಕ್ಯತೆಯು ಇಂದು ನಮ್ಮ ಶತ್ರುಗಳ ಕಣ್ಣಿಗೆ ಬಂದಿದ್ದು, ಅದನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಆದರೆ, ಅದರ ವಿರುದ್ಧ ನಾವು ದೃಢವಾಗಿ ನಿಲ್ಲಬೇಕಿದೆ ಎಂದು ಮೋದಿಯವರು ಹೇಳಿದರು.
ಇದು ಈಗ ನಡೆಯುತ್ತಿರುವ ಪ್ರಯತ್ನವಲ್ಲ. ಸಾವಿರಾರು ವರ್ಷಗಳಿಂದ ಮತ್ತು ನಮ್ಮ ಗುಲಾಮಗಿರಿಯ ಸಮಯದಲ್ಲೂ ಕೂಡ ಇಂತಹ ಪ್ರಯತ್ನಗಳು ನಡೆದಿದ್ದವು. ನಮ್ಮ ಐಕ್ಯತೆಯನ್ನು ಮುರಿಯಲು ತಮ್ಮಿಂದಾದ ಎಲ್ಲಾ ಎಲ್ಲಾ ಪ್ರಯತ್ನ ಮಾಡಿದ್ದರು. ಅಂದು ಹರಡಿದ್ದ ವಿಷದಿಂದಾಗಿ ಇಂದಿಗೂ ನಾವು ಸಮಸ್ಯೆ ಎದುರಿಸುತ್ತಿದ್ದೇವೆ. ದೇಶ ವಿಭಜಿಸಿ, ಅದರ ಲಾಭ ಪಡೆದುಕೊಂಡವರನ್ನೂ ನಾವು ನೋಡಿದ್ದೇವೆ. ಈಗಲೂ ಆ ಶಕ್ತಿಗಳು ದೇಶದಲ್ಲಿವೆ.
ಜಾತಿ, ಪ್ರದೇಶ ಹಾಗೂ ಭಾಷೆ ಹೆಸರಿನಲ್ಲಿ ಜನರ ವಿಭಜಿಸಲು ಯತ್ನಿಸುತ್ತಿವೆ. ಜನರು ಪರಸ್ಪರ ಒಗ್ಗಟ್ಟಿನಿಂದ ನಿಲ್ಲಲು ಸಾಧ್ಯವಾಗದಂತೆ ಮಾಡಲು ಇತಿಹಾಸವನ್ನೂ ತಿರುಚುತ್ತಿದ್ದಾರೆ. ಆ ಶಕ್ತಿಗಳು ನಮಗೆ ತಿಳಿದಿರುವ ಹೊರಗಿನ ವೈರಿಗಳಲ್ಲ, ಗುಲಾಮಿ ಮನಸ್ಥಿತಿಯ ರೂಪದಲ್ಲಿ ನಮ್ಮೊಳಗೆ ಪ್ರವೇಶಿಸುತ್ತವೆ ಎಂಬುದು ನಮಗೆ ಅರಿವಿರಬೇಕು. ನಾವು ಈ ದೇಶದ ಮಕ್ಕಳಾಗಿ, ಒಂದಾಗಿ ನಿಂತು ಅವುಗಳಿಗೆ (ವೈರಿಗಳಿಗೆ) ಉತ್ತರಿಸಬೇಕು ಎಂದಿದ್ದಾರೆ.