ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ: ವೀಡಿಯೋ ಕಾಲ್ ವೈರಲ್, ನಿಗೂಢ ಮಹಿಳೆಗಾಗಿ ಪೊಲೀಸರ ಹುಡುಕಾಟ
ಬೆಂಗಳೂರು: ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ 45 ವರ್ಷದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಪ್ರಚೋದನೆ ಕುರಿತ ತನಿಖೆಯನ್ನು ಚುರುಕುಗೊಳಿಸಿರುವ ರಾಮನಗರ ಜಿಲ್ಲಾ ಪೊಲೀಸರು, ಮಹಿಳೆಯೊಬ್ಬರ ಜೊತೆ ಸ್ವಾಮೀಜಿ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾದ ವಿಡಿಯೋದಲ್ಲಿರುವ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಮಹಿಳೆಯ ಧ್ವನಿ ವಿಡಿಯೋದಲ್ಲಿ ದಾಖಲಾಗಿದೆ. ಪೊಲೀಸರು ವೀಡಿಯೊದ ಅಸಲಿತನವನ್ನು ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ಅಂತಹ ಮಹಿಳೆ ಇದ್ದಲ್ಲಿ ಸ್ವಾಮೀಜಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರಬಹುದೇ ಎಂಬ ಅಂಶದ ಬಗ್ಗೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಸ್ವಾಮೀಜಿಗೆ ಆಪ್ತರಾಗಿದ್ದ ಕಾರು ಚಾಲಕ ಮತ್ತು ಮಠದ ಅರ್ಚಕರ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ವಿಡಿಯೋ ಮಾಡಿದವರು ಯಾರು ಎಂಬುದನ್ನು ಕಂಡುಹಿಡಿಯಲು ಪೊಲೀಸರು ಮೂವರು ಮಹಿಳೆಯರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮತ್ತೊಂದು ಆತ್ಮಹತ್ಯೆ ಪತ್ರವನ್ನು ಮಠದಲ್ಲಿನ ಯಾರೊ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ ಮತ್ತು ಅದನ್ನು ಪೊಲೀಸರಿಗೆ ಹಸ್ತಾಂತರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಸ್ವಾಮೀಜಿ ಆತ್ಮಹತ್ಯೆಯಲ್ಲಿ ಮಹಿಳೆ ಭಾಗಿಯಾಗಿದ್ದಾಳೆ ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ದೃಢೀಕರಣ ಸಿಕ್ಕಿಲ್ಲ. ಪ್ರಾಥಮಿಕ ತನಿಖೆ ಅಂಶಗಳ ಪ್ರಕಾರ, ಸ್ವಾಮೀಜಿ ಕೆಲವು ವೈಯಕ್ತಿಕ ಸಮಸ್ಯೆಗಳ ಒತ್ತಡದಲ್ಲಿದ್ದರು ಎಂಬ ಸಲಹೆ ನೀಡಿವೆ.
ಸೋಮವಾರ ಮುಂಜಾನೆ ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮದ ಮಠದಲ್ಲಿ ವಾಸದ ಕೋಣೆಯಲ್ಲಿ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ವರದಿಯಾಗಿದೆ. ಅವರು ಕೆಲವು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ನೋಟ್ ಬರೆದಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಪ್ರಕರಣವನ್ನು ಕುದೂರು ಪೊಲೀಸರಿಂದ ಮಾಗಡಿ ಪೊಲೀಸರಿಗೆ ವರ್ಗಾಯಿಸಲಾಗಿತ್ತು.