Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ಮೀಸಲಾತಿ ಹೆಚ್ಚಳ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಠ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆ– 2022 ಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಭಾನುವಾರ ಅಂಕಿತ ಹಾಕಿದ್ದಾರೆ.

ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿಗೆ ಅನುಗುಣವಾಗಿ ಸುಗ್ರೀವಾಜ್ಞೆ ಅಂಗೀಕಾರವಾಗುವುದರಿಂದ ಪರಿಶಿಷ್ಟ ಜಾತಿಯ ಮೀಸಲಾತಿಯು ಈಗಿರುವ ಶೇ 15 ರಿಂದ ಶೇ.17ಕ್ಕೆ ಏರಿಕೆಯಾಗಲಿದೆ. ಪರಿಶಿಷ್ಟ ಪಂಗಡದ ಮೀಸಲಾತಿಯು ಶೇ 3ರಿಂದ ಶೇ 7ರಷ್ಟಾಗಲಿದೆ.

ರಾಜ್ಯ ಸಚಿವ ಸಂಪುಟ ಕೆಲವು ದಿನಗಳ ಹಿಂದೆ ಮೀಸಲಾತಿ ಹೆಚ್ಚಿಸುವ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿತ್ತು. ಭಾನುವಾರ ಅದಕ್ಕೆ ರಾಜ್ಯಪಾಲರ ಒಪ್ಪಿಗೆ ಸಿಕ್ಕಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ನಿರ್ಧಾರವನ್ನು ಸ್ವಾಗತಿಸಿದ್ದು, ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಸುಗ್ರೀವಾಜ್ಞೆಯನ್ನು ಮಂಡಿಸಿ, ಅದನ್ನು ತೆರವುಗೊಳಿಸಲಾಗುವುದು. ಮೀಸಲಾತಿ ಹೆಚ್ಚಿಸುವ ಬದ್ಧತೆಯೊಂದಿಗೆ ನಮ್ಮ ಸರ್ಕಾರ ಮುನ್ನಡೆಯಿತು. ಇದು ಎಸ್‌ಸಿ/ಎಸ್‌ಟಿಗಳಿಗೆ ನಮ್ಮ ಸರ್ಕಾರ ನೀಡಿದ ಕೊಡುಗೆ ಎಂದು ಹೇಳಿದರು.

ಮೀಸಲಾತಿಯನ್ನು ಹೆಚ್ಚಿಸಲುವ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಈ ಸುಗ್ರೀವಾಜ್ಞೆಯು ಪರಿಶಿಷ್ಠ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೀಟುಗಳ ಮೀಸಲಾತಿ ನೀಡುವುದು ಮತ್ತು ರಾಜ್ಯದ ಅಡಿಯಲ್ಲಿನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ ಒದಗಿಸುವ ಗುರಿಯನ್ನು ಹೊಂದಿದೆ.

ಸುಗ್ರೀವಾಜ್ಞೆಯಲ್ಲಿ ಏನಿದೆ?

ಕೆಲವು ಸಮುದಾಯಗಳನ್ನು ಸೇರಿಸಿಕೊಂಡ ನಂತರ ಎಸ್‌ಸಿ, ಎಸ್‌ಟಿ ಜನಸಂಖ್ಯೆ ತೀವ್ರವಾಗಿ ಹೆಚ್ಚಿದೆ. 1976 ರಲ್ಲಿ ಎಸ್‌ಸಿ ಮತ್ತು ಎಸ್‌ಟಿ ಆದೇಶಗಳ ತಿದ್ದುಪಡಿ ಕಾಯ್ದೆ1976 (1976ರ ಕೇಂದ್ರ ಕಾಯ್ದೆ 108) ಅನುಸಾರ ಜಾತಿಗಳಿಗೆ ಹಾಕಲಾಗಿದ್ದ ಭೌಗೋಳಿಕ ಮಿತಿಗಳನ್ನು ತೆಗೆದುಹಾಕಿರುವುದು ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಜನಸಂಖ್ಯೆ ಅಸಾಧಾರಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಗೆಜೆಟ್ ಅಧಿಸೂಚನೆ ಹೇಳಿದೆ.

ಇದನ್ನೂ ಓದಿ: ಎಸ್ ಸಿ, ಎಸ್ ಟಿಗೆ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ, ರಾಜ್ಯ ಸಚಿವ ಸಂಪುಟದ ಅನುಮೋದನೆ

ಆದರೆ, ಮೀಸಲಾಯಿತಿಯು 1958ರಲ್ಲಿ ಇದ್ದಂತೆ ಎಸ್‌ಸಿ ಶೇ 15, ಎಸ್‌ಟಿ ಶೇ 3ರಷ್ಟು ಮಾತ್ರ ಇದೆ. ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗ ಮತ್ತು ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಸಮಿತಿ ವರದಿಗಳ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಲು ವಿಶೇಷ ಪ್ರಕರಣವನ್ನು ರೂಪಿಸುವ ಅಗತ್ಯವಿದೆ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಕೇವಲ ಆರು ತಿಂಗಳು ಬಾಕಿ ಇದ್ದು, ರಾಜ್ಯದ ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಓಲೈಸುವ ಬಿಜೆಪಿ ಸರ್ಕಾರದ ಪ್ರಯತ್ನವಾಗಿ ಈ ಕ್ರಮವನ್ನು ನೋಡಲಾಗುತ್ತದೆ.

ಮೀಸಲಾತಿ ಎಲ್ಲೆಲ್ಲಿ ಅನ್ವಯಿಸುತ್ತದೆ?

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವು ರಾಜ್ಯ ಸರ್ಕಾರದ ಅಥವಾ ಅನುದಾನಿತ ಯಾವುದೇ ಶಾಲೆ, ಕಾಲೇಜು ಅಥವಾ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಅವಕಾಶಕ್ಕೆ ಅನ್ವಯ ಆಗಲಿದೆ. ರಾಜ್ಯ ಸರ್ಕಾರಿ ಅಂದರೆ, ಸರ್ಕಾರ, ವಿಧಾನಮಂಡಲ, ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ನಿಗಮ ಅಥವಾ ಕಂಪನಿ. ಸಾರ್ವಜನಿಕ ಸಂಸ್ಥೆಗಳು ಅಂದರೆ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾದ ಸಹಕಾರ ಸಂಘಗಳು, ಸರ್ಕಾರಿ ಅಥವಾ ಅನುದಾನಿತ ಶೈಕ್ಷಣಿಕ ಸಂಸ್ಥೆಗಳು, ಕಂಪನಿ ಕಾಯ್ದೆಗಳಡಿ ಬರುವ ಸರ್ಕಾರಿ ಕಂಪನಿ, ಸ್ಥಳೀಯ ಪ್ರಾಧಿಕಾರ, ಸರ್ಕಾರದ ಒಡೆತನ ಅಥವಾ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಗಳಲ್ಲಿ ನೇಮಕಾತಿ ಮತ್ತು ಹುದ್ದೆಗಳಿಗೆ ಅನ್ವಯ ಆಗಲಿದೆ.

ನೇಮಕಾತಿ ಅಥವಾ ಹುದ್ದೆಗಳಿಗೆ ಸ್ವಂತ ಅರ್ಹತೆಯ ಆಧಾರದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರು ಆಯ್ಕೆಯಾಗಿದ್ದರೆ, ಅಂಥವರನ್ನು ಮೀಸಲಾತಿಯಡಿ ಪರಿಗಣಿಸುವಂತಿಲ್ಲ. ಆ ಮೂಲಕ, ಮೀಸಲಿರಿಸಿದ ಸಂಖ್ಯೆಗೆ ಯಾವುದೇ ರೀತಿಯ ಬಾಧಕ ಉಂಟಾಗುವಂತಿಲ್ಲ ಎಂದೂ ಸುಗ್ರೀವಾಜ್ಞೆಯಲ್ಲಿ ಸ್ಪಷ್ಟಪಡಿಸಲಾಗಿದೆ.

No Comments

Leave A Comment