Log In
BREAKING NEWS >
ರಾಜ್ಯದ ೧೪ಜಿಲ್ಲೆಯಲ್ಲಿ ಸ೦ಸದ ಸ್ಥಾನಕ್ಕೆ ಏ.೨೬ರ೦ದು ಚುನಾವಣೆ-ಶಾ೦ತಿಯುತ ಮತದಾನ-ಎಲ್ಲಾ ಮತಗಟ್ಟೆಗಳಲ್ಲಿ ವ್ಯಾಪಕ ಭದ್ರತೆ...

ಟಿಕೆಟ್ ಹಂಚಿಕೆಯಲ್ಲಿ ಗೊಂದಲದ ಗೂಡಾಗುತ್ತಿರುವ ಜೆಡಿಎಸ್: ಹಾಸನಕ್ಕೆ ಸ್ವರೂಪ್ ಪ್ರಕಾಶ್ ಫಿಕ್ಸ್! ಕೆ.ಆರ್ ಪೇಟೆಗೆ ಭವಾನಿ ರೇವಣ್ಣ ಶಿಫ್ಟ್?

ಹಾಸನ: ಮುಂಬರುವ ವಿಧಾನಸಬೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಟಿಕೆಟ ಹಂಚಿಕೆಯಲ್ಲಿ ಎಲ್ಲಾ ಸಾಧ್ಯತೆ-ಭಾದ್ಯತೆಗಳನ್ನು ಲೆಕ್ಕಾಚಾರ ಮಾಡುತ್ತಿರುವ ಜೆಡಿಎಸ್ ಭವಾನಿ ರೇವಣ್ಣ ಅವರನ್ನು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದಿಂದ ಕಣಕ್ಕಿಳಿಸಲು ಯೋಜಿಸುತ್ತಿದೆ ಎಂಬುದಾಗಿ ತಿಳಿದು ಬಂದಿದೆ.

 ಅವರ ಪತ್ನಿ ಭವಾನಿ ಒತ್ತಡಕ್ಕೆ ಮಣಿಯದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ  ಜೆಡಿಎಸ್ ಮುಖಂಡ ಪ್ರಕಾಶ್ ಪುತ್ರ ಸ್ವರೂಪ್ ಅವರಿಗೆ ಟಿಕೆಟ್ ನೀಡಲು ಒಲವು ತೋರಿದ್ದಾರೆ ಎನ್ನಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಕುಟುಂಬದವರೆಲ್ಲರೂ ಭಾಗವಹಿಸಿ ಒಗ್ಗಟ್ಟು ತೋರಿದ್ದಾರೆ. ಈಗಾಗಲೇ ರೇವಣ್ಣ ಮತ್ತು ಅವರ ಇಬ್ಬರು ಪುತ್ರರು ರಾಜಕೀಯದಲ್ಲಿರುವುದರಿಂದ ಕುಟುಂಬ ರಾಜಕೀಯದ ಆರೋಪಗಳನ್ನು ಮತ್ತೆ ತೆಗೆದುಕೊಳ್ಳಲು ಎಚ್.ಡಿ ಕೆ ಸಿದ್ದರಿಲ್ಲ,  ಹೀಗಾಗಿ ಹಾಸನ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ.

ಮೊದಲ ಹಂತದಲ್ಲಿ ಜೆಡಿಎಸ್ 93 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ, ಇದರಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಘೋಷಿಸಿದೆ. ನಾನು ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಸ್ವತಃ ಭವಾನಿ ರೇವಣ್ಣ ಘೋಷಿಸಿದಾಗ ಕುಟುಂಬ ಇಕ್ಕಟ್ಟಿಗೆ ಸಿಲುಕಿತ್ತು. ಇದು ವಿರೋಧ ಪಕ್ಷಗಳ ಚರ್ಚೆಗೆ ಆಹಾರವಾಗಿತ್ತು. ಇದರಿಂದ ದಳಪತಿಗಳ ಮನೆಯಲ್ಲಿ ಹೊತ್ತಿದ್ದ ರಾಜಕೀಯ ಬೆಂಕಿ ತಣ್ಣಗಾಗಿಸಲು ರೇವಣ್ಣ ಬಲವಂತವಾಗಿ ಮಧ್ಯ ಪ್ರವೇಶಿಸಿದ್ದರು.

ಹಾಸನ ಜೆಡಿಎಸ್ ಅಭ್ಯರ್ಥಿ ಸಂಬಂಧ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಎಚ್ .ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ರೇವಣ್ಣ ಹೇಳಿದ್ದರು.

ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಸ್ವರೂಪ್ ಪ್ರಕಾಶ್ ಸಮರ್ಥ ಅಭ್ಯರ್ಥಿಯಲ್ಲ ಎಂದು ತಿಳಿದಿರುವ ಕೆಲವು ಜೆಡಿಎಸ್ ನಾಯಕರು ಪ್ರೀತಂ ವಿರುದ್ಧ ಹಾಸನದಿಂದ ರೇವಣ್ಣ ಅವರನ್ನೇ ಕಣಕ್ಕಿಳಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೊಂದೆಡೆ ಹಾಸನ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಭವಾನಿ,  ಚನ್ನರಾಯಪಟ್ಟಣ ಕ್ಷೇತ್ರಕ್ಕೆ ಸಮೀಪವಾಗಿರುವ ಕೆ.ಆರ್ ಪೇಟೆಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಜೆಡಿಎಸ್ ಸರ್ಕಲ್ ನಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಕೆ.ಆರ್ ಪೇಟೆಯಿಂದ ದೇವೇಗೌಡರ ಪುತ್ರಿ ಅನುಸೂಯ ಅಥವಾ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸುವಂತೆ ಗೌಡರ ಕುಟುಂಬದ ಕೆಲ ನಿಷ್ಠಾವಂತ ನಾಯಕರು ಒತ್ತಾಯ ಮಾಡುತ್ತಿದ್ದಾರೆ, ಇದರಿಂದ ಸಚಿವ ಕೆ.ಸಿ ನಾರಾಯಣಗೌಡ ಅವರನ್ನು ಸೋಲಿಸಬಹುದು ಎಂಬ ಲೆಕ್ಕಾಚಾರವಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಕೆಆರ್ ಪೇಟೆ ಕ್ಷೇತ್ರದಲ್ಲಿ ಮಂಜು ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದರೂ,  ಪರಾಜಿತ ಅಭ್ಯರ್ಥಿ ದೇವರಾಜ್, ಜೆಡಿಎಸ್ ಮುಖಂಡರಾದ ಕೃಷ್ಣೇಗೌಡ ಮತ್ತು ಶ್ರೀನಿವಾಸ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ತಮ್ಮ ಬೆಂಬಲಿಗರ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ.  ಚಂದನ್ ಗೌಡ ಸೇರಿ ಕೆಲ ನಾಯಕರು ಪಕ್ಷೇತರರಾಗಿ ಕಣಕ್ಕೆ ಇಳಿಯಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಜಾಡು ಹಿಡಿದು ಭಿನ್ನಮತದ ಆತಂಕದಲ್ಲಿರುವ ಜೆಡಿಎಸ್ ನಾಯಕರು ಮಂಡ್ಯದಲ್ಲಿ ಯಾವುದೇ ಸ್ಥಾನ ಕಳೆದುಕೊಳ್ಳುವ ರಿಸ್ಕ್ ತೆಗೆದುಕೊಳ್ಳಲು ಬಯಸುತ್ತಿಲ್ಲ.  ಹೀಗಾಗಿ ಭವಾನಿ ಸ್ಪರ್ಧೆ ಸಂಬಂಧ  ಹೆಚ್ ಡಿ ದೇವೇಗೌಡರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ.

2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ರುಚಿ ಕಂಡ ನಂತರ ಗೌಡರ ಕುಟುಂಬ ಸದಸ್ಯರು ಕೂಡ ಜಾಗರೂಕರಾಗಿದ್ದಾರೆ.  ಅಂತಿಮ ಘೋಷಣೆಗೆ ಮುನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಯಸಿದ್ದಾರೆ.

No Comments

Leave A Comment