Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಭೂ ಕಂದಾಯ ಕಾನೂನು ಸರಳೀಕರಣಕ್ಕೆ ಪ್ರಯತ್ನ- ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಆರ್ಥಿಕವಾಗಿ ಹಿಂದುಳಿದ ಜನರು ವಸತಿಗಾಗಿ ನಿವೇಶನ ಪಡೆಯಲು ಸುಲಭವಾಗುವಂತೆ ಈಗಿರುವ ಭೂ  ಕಂದಾಯ ಕಾನೂನನ್ನು ಸರಳೀಕರಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಭರವಸೆ ನೀಡಿದ್ದಾರೆ.

ಯಲಹಂಕ ತಾಲ್ಲೂಕಿನ ಅಗ್ರಹಾರ ಪಾಳ್ಯದಲ್ಲಿ   ಇಂದು ಆಯೋಜಿಸಲಾಗಿದ್ದ ವಸತಿ ಸಮುಚ್ಛಯಗಳ ಲೋಕಾರ್ಪಣೆ ಮತ್ತು ಮನೆಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೊಡ್ಡ ಪ್ರಮಾಣದಲ್ಲಿ ನಗರಗಳು ಬೆಳೆಯುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಬಡವರಿಗೂ ಅತ್ಯಗತ್ಯವಾದ ವಸತಿ ಸೌಲಭ್ಯ ದೊರಕಿಸಿಕೊಡುವುದು ಸರ್ಕಾರದ ಜವಾಬ್ದಾರಿ ಎಂದರು.

 ಆರು ವರ್ಷಗಳ ಹಿಂದೆ, ಹಿಂದಿನ ಸರ್ಕಾರ 15 ಲಕ್ಷ ಮನೆಗಳನ್ನು ಒದಗಿಸುವ ಘೋಷಣೆ ಮಾಡಿತ್ತು. ಆದರೆ, ಅದಕ್ಕೆ ಅನುದಾನ ನಿಗದಿಪಡಿಸಲು ವಿಫಲವಾಗಿತ್ತು. ಇದೀಗ ನಮ್ಮ ಸರ್ಕಾರವು 10 ಲಕ್ಷ ಮನೆಗಳನ್ನು ಒದಗಿಸಲು ಗುರಿ ಹೊಂದಿದ್ದು, ಈಗಾಗಲೇ 5ಲಕ್ಷ ಮನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ವಸತಿ ಇಲಾಖೆಯಿಂದ ಬೆಂಗಳೂರಿನಲ್ಲಿ 50 ಸಾವಿರ ಮನೆಗಳ ನಿರ್ಮಾಣಕ್ಕೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟಾರೆ 493 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವ ಹಂತದಲ್ಲಿದೆ ಎಂದ ಅವರು ಅವುಗಳಲ್ಲಿ ಸುಮಾರು 5 ಸಾವಿರ ಮನೆಗಳನ್ನು ಇಂದು ಬೆಂಗಳೂರಿನ ವಿವಿಧ ಕ್ಷೇತ್ರಗಳಲ್ಲಿ ಒಮ್ಮೆಲೆ ಹಸ್ತಾಂತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

 ವಿ ಸೋಮಣ್ಣ ವಸತಿ ಸಚಿವರಾದ ನಂತರ ರಾಜ್ಯದಲ್ಲಿ ವಸತಿ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ರಾಜ್ಯಾದ್ಯಂತ 3ಲಕ್ಷಕ್ಕೂ ಹೆಚ್ಚು ಮನೆಗಳನ್ನು  ನೀಡಿ ದಾಖಲೆ ನಿರ್ಮಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು. ಯಲಹಂಕ ಕ್ಷೇತ್ರವು ಶಾಸಕ ಹಾಗೂ ಬಿ.ಡಿ.ಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಅವರ ಶ್ರಮದಿಂದಾಗಿ ಸಾಕಷ್ಟು ಅಭಿವೃದ್ದಿ ಕಂಡಿದೆ. ಜನಪ್ರತಿನಿಧಿಗಳು ಕೇವಲ ಜನಪ್ರಯರಾಗದೆ ಅವರಂತೆ ಜನೋಪಯೋಗಿ ಶಾಸಕರಾಗಬೇಕು ಎಂದು ಕರೆಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಸತಿ ಸಚಿವ ವಿ ಸೋಮಣ್ಣ, ಬರುವ ಮಾರ್ಚ್ ಅಂತ್ಯದೊಳಗಾಗಿ ಇಲಾಖೆಯು 20 ಸಾವಿರ ಮನೆಗಳ ಹಸ್ತಾಂತರ ಕಾರ್ಯವನ್ನು ಕೈಗೊಳ್ಳಲಿದೆ.  ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಅತ್ಯಂತ ಕಾಳಜಿ ವಹಿಸಿ  ಇಂದು ಸಹಸ್ರಾರು ಬಡಜನರಿಗೆ ಕೈಗೆಟುಕುವ ಬೆಲೆಯಲ್ಲಿ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದೆ  ಎಂದರು.

 ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಮತ್ತಿತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

No Comments

Leave A Comment