
ಜರ್ಮನಿಯ ಸಾಫ್ಟ್ ವೇರ್ ದಿಗ್ಗಜ ಸಂಸ್ಥೆ ಎಸ್ಎಪಿಯಿಂದ 3 ಸಾವಿರ ಉದ್ಯೋಗ ಕಡಿತ
ಬರ್ಲಿನ್: ಜಾಗತಿಕ ಮಟ್ಟದಲ್ಲಿ ಉದ್ಯೋಗಳ ಕಡಿತ ಮುಂದುವರೆದಿದ್ದು, ಜರ್ಮನ್ ಸಾಫ್ಟ್ ವೇರ್ ದೈತ್ಯ ಎಸ್ಎಪಿ 3,000 ಉದ್ಯೋಗಗಳನ್ನು ಕಡಿತಗೊಳಿಸುತ್ತಿರುವುದಾಗಿ ಹೇಳಿದೆ.
ಜಾಗತಿಕ ಟೆಕ್ ಕ್ಷೇತ್ರದಲ್ಲಿ ಈ ಉದ್ಯೋಗಗಳ ಕಡಿತವಾಗಲಿದೆ. ವಾಲ್ಡೋರ್ಫ್ ಮೂಲದ ಸಂಸ್ಥೆ ಸಾಂಪ್ರದಾಯಿಕ ಸಾಫ್ಟ್ ವೇರ್ ಹಾಗೂ ಕ್ಲೌಡ್ ಆಧರಿತ ಕಂಪ್ಯೂಟಿಂಗ್ ಸೇವೆಗಳನ್ನು ಒದಗಿಸುತ್ತಿದ್ದು ಈಗ ಮುಖ್ಯ ವ್ಯಾಪಾರದತ್ತ ಹೆಚ್ಚು ಗಮನ ಹರಿಸುವುದಕ್ಕಾಗಿ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉದ್ದೇಶಿತ ಪುನರ್ರಚನಾ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುತ್ತಿರುವುದಾಗಿ ಹೇಳಿದೆ.
ಎಸ್ಎಪಿಯ ಒಟ್ಟು ನೌಕರರ ಪೈಕಿ ಅಂದಾಜು ಶೇ.2.5 ರಷ್ಟು ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು 2022 ರ ಪೂರ್ಣ ವರ್ಷದ ಫಲಿತಾಂಶಗಳನ್ನು ಅನಾವರಣಗೊಳಿಸುವ ವರದಿಯಲ್ಲಿ ಹೇಳಿದೆ. ಜಾಗತಿಕ ಮಟ್ಟದಲ್ಲಿ ಎಸ್ಎಪಿ 120,000 ಮಂದಿ ಉದ್ಯೋಗಿಗಳನ್ನು ಹೊಂದಿದ್ದು, 3000 ಮಂದಿಯನ್ನು ವಜಾಗೊಳಿಸಲು ಎಸ್ಎಪಿ ಮುಂದಾಗಿದೆ.
ಇಂತಹದ್ದೇ ಕ್ರಮಗಳನ್ನು ಟೆಕ್ ದೈತ್ಯ ಸಂಸ್ಥೆಗಳಾದ ಮೆಟಾ, ಅಮೇಜಾನ್, ಗೂಗಲ್, ಐಬಿಎಂ, ಮೈಕ್ರೋಸಾಫ್ಟ್ ಗಳು ಘೋಷಿಸಿದ್ದವು. ಎಸ್ಎಪಿಯ ಪ್ರಕಾರ ಈ ಉದ್ಯೋಗ ಕಡಿತದಿಂದಾಗಿ 2023 ರ ಮೊದಲ ತ್ರೈಮಾಸಿಕದಲ್ಲಿ ಸಂಸ್ಥೆಗೆ 250-300 ಮಿಲಿಯನ್ ಯೂರೋಗಳಷ್ಟು ಉಳಿತಾಯವಾಗಲಿದ್ದು, ಪುನರ್ ರಚನೆಯಿಂದಾಗಿ 2024 ರಿಂದ 300-350 ಮಿಲಿಯನ್ ಯೂರೋಗಳಷ್ಟು ವಾರ್ಷಿಕ ಉಳಿತಾಯವಾಗಲಿದೆ, ಈ ಉಳಿತಾಯವನ್ನು ಕಾರ್ಯತಂತ್ರದ ಬೆಳವಣಿಗೆಯ ಪ್ರದೇಶಗಳಲ್ಲಿ ಹೂಡಿಕೆ ಮಾಡುವುದಾಗಿ ಸಂಸ್ಥೆ ತಿಳಿಸಿದೆ.
ಇನ್ನು ಎಸ್ಎಪಿ ತನ್ನ ಅಂಗಸಂಸ್ಥೆಯಾಗಿರುವ, ಆನ್ ಲೈನ್ ಮಾರುಕಟ್ಟೆ ಸಂಶೋಧನೆ ಸಾಫ್ಟ್ ವೇರ್ ಕ್ವಾಲ್ಟ್ರಿಕ್ಸ್ ನ್ನು ಮಾರಾಟ ಮಾಡುವ ಸಾಧ್ಯತೆಗಳನ್ನೂ ಅನ್ವೇಷಿಸುವುದಾಗಿ ತಿಳಿಸಿದೆ.