Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕರಾವಳಿ, ಮಲೆನಾಡಿನಲ್ಲಿ ಬಿಜೆಪಿ ಓಟಕ್ಕೆ ಬ್ರೇಕ್ ಹಾಕುವ ತಂತ್ರ: ಮಂಗಳೂರಿನಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಸಭೆ

ಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಯ ಗೆಲುವು ಸಾಧಿಸುವ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಮಲೆನಾಡು ಸೇರಿದಂತೆ 6 ಜಿಲ್ಲೆಗಳ ಆಕಾಂಕ್ಷಿ ಅಭ್ಯರ್ಥಿಗಳ ಮತ್ತು ನಾಯಕರ ಸಭೆ ನಗರದ ಮಲ್ಲಿಕಟ್ಟೆಯಲ್ಲಿ ಬುಧವಾರ ನಡೆಯಿತು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ‌ ಮತ್ತು ಬಿ.ಕೆ. ಹರಿಪ್ರಸಾದ್ ಉಸ್ತುವಾರಿಯಲ್ಲಿ ಹೈವೋಲ್ಟೇಜ್ ಸಭೆ ನಡೆಯಿತು.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಮೇಲೆ ಈ ಬಾರಿ ಹಿಡಿತ ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, 2019ರ ಲೋಕಸಭೆ ಚುನಾವಣೆ ಅಭ್ಯರ್ಥಿಗಳು, 2013 ಮತ್ತು 2018ರ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳು, ಹೊಸ ಆಕಾಂಕ್ಷಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣೆ ತಯಾರಿ, ಪ್ರಚಾರ ಕಾರ್ಯ, ಪ್ರಣಾಳಿಕೆ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. 8 ವರ್ಷಗಳ ಬಿಜೆಪಿ ಆಡಳಿತದ ವೈಫಲ್ಯಗಳು, ಭ್ರಷ್ಟಾಚಾರದ ಬಗ್ಗೆ ಜನರಿಗೆ ಮನವರಿಕೆ ಮಾಡುವುದು, ಕಾಂಗ್ರೆಸ್ ಅವಧಿ ಸಾಧನೆಗಳ ಬಗ್ಗೆ ಜನರಿಗೆ ಮತ್ತೆ ತಿಳಿಸುವ ಕಾರ್ಯಕ್ರಮ ಏರ್ಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ವಿಧಾನಸಭೆ ಮಟ್ಟದಲ್ಲಿಯೂ ಸಭೆ ನಡೆಸುವ ಬಗ್ಗೆಯೂ ಚಿಂತನೆ ಕೂಡ ನಡೆಸಲಾಯಿತು.

ಕರಾವಳಿ ಜಿಲ್ಲೆಗಳ ಜತೆಗೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಮೇಲೆ ಕೂಡ ಈ ಬಾರಿ ಹಿಡಿತ ಸಾಧಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕರಾವಳಿಗೆ ಸೀಮಿತವಾಗಿ ಒಟ್ಟು 10 ಅಂಶಗಳ ವಿಶೇಷ ಯೋಜನೆಗಳ ದಾಳವನ್ನು ಉರುಳಿಸುವ ಮೂಲಕ ಕಾಂಗ್ರೆಸ್ ಕರಾವಳಿ ಮತ ಬುಟ್ಟಿಗೆ ಕೈ ಹಾಕಿದೆ. ವಿಧಾನ ಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಬಿಜೆಪಿ ಓಟಕ್ಕೆ ಬ್ರೇಕ್ ಹಾಕುವ ಸಲುವಾಗಿ ಸುರ್ಜೇವಾಲಾ, ಹರಿಪ್ರಸಾದ್ ಅವರ ನೇತೃತ್ವದಲ್ಲಿ ಸಭೆ ನಡೆಸಿದೆ.

ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್, ಮಾಜಿ ಸಚಿವ ಬಿ. ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್,ಕಡೂರು ಮಾಜಿ ಶಾಸಕ ವೈ.ಎಸ್. ದತ್ತಾ, ಮಾಜಿ ಶಾಸಕರುಗಳಾದ ಜೆ.ಆರ್. ಲೋಬೊ, ಮೊಯ್ದೀನ್ ಬಾವಾ, ವಸಂತ ಬಂಗೇರ, ಮಿಥುನ್ ರೈ‌ ಮುಂತಾದವರು ಉಪಸ್ಥಿತರಿದ್ದರು.

No Comments

Leave A Comment